ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್ ಷಾರೊಂದಿಗೆ ಚರ್ಚೆ-ಬಿ.ಎಸ್.ಯಡಿಯೂರಪ್ಪ

   ಬೆಂಗಳೂರು ಆಗಸ್ಟ್ 22     ನೂತನ ಸಚಿವರಿಗೆ ಖಾತೆಗಳ ಹಂಚಿಕೆ ವಿಷಯವಾಗಿ ಇಂದು ಸಂಜೆ ದೆಹಲಿಗೆ ಭೇಟಿ ನೀಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ಬಗ್ಗೆ ಚರ್ಚಿಸಿ ಇತ್ಯರ್ಥ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಇಲ್ಲಿ ತಿಳಿಸಿದ್ದಾರೆ.. 

   ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ತಕ್ಷಣ 10 ಸಾವಿರ ರೂ ಪರಿಹಾರ ವಿತರಣೆಯನ್ನು ಇಂದು ಸಂಜೆಯೊಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ನೆರೆ ಪರಿಹಾರ ಕಾಮಗಾರಿಗಳ ಬಗ್ಗೆ ಎಲ್ಲ ಸಚಿವರು ಪರಿಶೀಲನೆ ನಡೆಸಿದ್ದಾರೆ.ನಾಳೆ ಅವರೆಲ್ಲರಿಂದ ವರದಿ ಪಡೆದು ಮನೆ ನಿರ್ಮಾಣ ಸೇರಿದಂತೆ ಉಳಿದೆಲ್ಲ ಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದು ಹೇಳಿದ್ದಾರೆ.  

   ಈ ಮಧ್ಯೆ, ಮುಖ್ಯಮಂತ್ರಿಯವರು ನೂತನ ಸಚಿವರಿಗೆ ಕರೆ ಮಾಡಿ ನೆರೆ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಪ್ರವಾಹದ ನಂತರದ ಪರಿಸ್ಥಿತಿ ಮಾಹಿತಿ ಸಂಗ್ರಹಿಸಿದ ಅವರು, ಯಾವುದೇ ಕುಂದುಕೊರತೆ ಆಗದ ರೀತಿಯಲ್ಲಿ ನೋಡಿಕೊಳ್ಳಿ. ಎರಡೇ ದಿನ ಇರಬೇಕೆಂದಿಲ್ಲ. ಪರಿಸ್ಥಿತಿ ನೋಡಿಕೊಂಡು ಅಲ್ಲೇ ಇರಿ ಎಂದು ಸಚಿವರಿಗೆ ಸೂಚಿಸಿದ್ದಾರೆ.  ಇನ್ನು ಎರಡು-ಮೂರು ದಿನದಲ್ಲಿ  ಮತ್ತೆ ವೈಮಾನಿಕ ಸಮಿಕ್ಷೆ  ಮಾಡುವುದಾಗಿ ಅವರು ಹೇಳಿದ್ದಾರೆ.  

   ಇದಕ್ಕೂ ಮುನ್ನ, ಡಾಲರ್ಸ್ ಕಾಲೋನಿ ನಿವಾಸದ ಮುಂದೆ ಜನತಾದರ್ಶನದಲ್ಲಿ  ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಮುಖ್ಯಮಂತ್ರಿ ಭೇಟಿಗೆ ಬಂದವರ ವಿಷಯದಲ್ಲೂ ತಾರತಮ್ಯ ಮಾಡುತ್ತಿರುವ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ತಾರತಮ್ಯ ತೋರಿದರು. ಮುಖ್ಯಮಂತ್ರಿ ಭೇಟಿಗೆ ಬಂದಿದ್ದ ಭೂಮಾಪನ ಹುದ್ದೆ ಅಭ್ಯರ್ಥಿಗಳನ್ನು  ಮುಖ್ಯಮಂತ್ರಿ ವಿಶೇಷಾಧಿಕಾರಿ ಲೋಕೇಶ್ ವಾಪಸ್ ಕಳುಹಿಸಿದರು. ಮುಖ್ಯಮಂತ್ರಿಯವರಿಂದ ನೆರವು ಕೇಳಿಕೊಂಡು ಬಂದವರಲ್ಲಿ ಕೆಲವರನ್ನು ಮಾತ್ರ ಮುಖ್ಯಮಂತ್ರಿ ಭೇಟಿಗೆ ಕರೆದೊಯ್ದು, ಉಳಿದವರನ್ನು ಲೋಕೇಶ್ ವಾಪಸ್ ಕಳುಹಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಭೂಮಾಪನ ಇಲಾಖೆಯಲ್ಲಿ 150 ಅಭ್ಯರ್ಥಿಗಳನ್ನು ಬಾಂದ್ ಜವಾನ ಹುದ್ದೆಗೆ ಆಯ್ಕೆ ಮಾಡಲಾಗಿತ್ತು.ನಿನ್ನೆ ಇದ್ದಕ್ಕಿದ್ದಂತೆ ಅಧಿಕಾರಿಗಳು ನೇಮಕಾತಿಯನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿದ್ದಾರೆ.ಗಾಬರಿಗೊಂಡ ಅಭ್ಯರ್ಥಿಗಳು ಬೆಂಗಳೂರಿಗೆ ಬಂದಿದ್ದು ಮುಖ್ಯಮಂತ್ರಿ ಬಳಿ ತಮ್ಮಅಳಲು ತೋಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.ಆದರೆ ಮಖ್ಯಮಂತ್ರಿ ಭೇಟಿಗೆ ಅಧಿಕಾರಿಗಳು ಅವಕಾಶ ಕೊಡದೆ ವಾಪಸ್ ಕಳುಹಿಸಿದ್ದಾರೆ.