ಕಾರವಾರ 06: ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ವತಿಯಿಂದ ನಗರದ ಬಿಣಗಾದಲ್ಲಿನ ಮುಡಲಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು.
ಡಿಸೆಂಬರ್ 6ರಂದು ಡಾ. ಬಿ.ಆರ್ ಅಂಬೇಡ್ಕರ್ ರವರ 68ನೇ ಪುಣ್ಯಸ್ಮರಣೆಯಾಗಿದ್ದ ಹಿನ್ನಲೆಯಲ್ಲಿ ಮಹಾಪರಿನಿರ್ವಾಣ ದಿನಾಚರಣೆ ಮಾಡುತ್ತಿದ್ದು ಈ ಹಿನ್ನಲೆಯಲ್ಲಿ ಸಂಘಟನೆ ವತಿಯಿಂದ ಶಾಲಾ ವಿಧ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಪೆನ್ನು ಹಾಗೂ ಹಾಲನ್ನ ವಿತರಿಸಲಾಯಿತು.
ಸಂಘಟನೆಯ ರಾಜ್ಯಾಧ್ಯಕ್ಷ ಎಲಿಷಾ ಎಲಕಪಾಟಿ ಮಾತನಾಡಿ ಅಂಬೇಡ್ಕರ್ ಅವರ ಚಿಂತನೆಗಳು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಸಮಾಜದಲ್ಲಿನ ಅಸಮಾನತೆ ವಿರುದ್ಧ ಗಟ್ಟಿ ಧ್ವನಿ ಎತ್ತಿ ಸಮಾನತೆಗಾಗಿ ಹೋರಾಡಿದ ಮಹಾ ಪುರುಷ ಅಂಬೇಡ್ಕರ್ ಅವರನ್ನ ಸದಾ ನಾವು ಸ್ಮರಿಸಬೇಕು. ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಸಮಾಜದಲ್ಲಿನ ತುಳಿತಕ್ಕೊಳಗಾದವರ ಏಳಿಗೆಗಾಗಿ ಹೋರಾಟ ನಡೆಸಿದರು. ಸಂವಿಧಾನವನ್ನ ಬರೆದು ತುಳಿತಕ್ಕೊಳಗಾದ ಸಮುದಾಯ ಇಂದು ತಲೆ ಎತ್ತಿ ನಿಲ್ಲುವಂತೆ ಮಾಡಿದರು. ಅವರ ಆದರ್ಶ, ಚಿಂತನೆಗಳು, ಎಲ್ಲರಿಗೂ ಮಾದರಿಯಾಗಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.
ಅಂಬೇಡ್ಕರ್ ಅವರ ಘೋಷವಾಕ್ಯದಲ್ಲಿ ಶಿಕ್ಷಣ ಮೊದಲನೆಯದಾಗಿದೆ. ಶಿಕ್ಷಣ ಪಡೆದ ವ್ಯಕ್ತಿ ಉನ್ನತ ಸ್ಥಾನಕ್ಕೆ ಹೋದರೆ ಈ ಸಮಾಜದಲ್ಲಿ ಅಸಮಾನತೆ ಕಡಿಮೆ ಆಗುತ್ತದೆ ಎನ್ನುವುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅವರ ಮಹಾ ಪರಿನಿರ್ವಾಣ ದಿನಾಚರಣೆಯಂದು ಪಠ್ಯ ಪುಸ್ತಕ, ಪೆನ್ನು ನೀಡಲಾಗುತ್ತಿದೆ. ಸಮಾಜದಲ್ಲಿ ದೊಡ್ಡ ಹುದ್ದೆ ಪಡೆಯಲು ಉತ್ತಮ ಶಿಕ್ಷಣ ಪಡೆಯಬೇಕು. ಅಂಬೇಡ್ಕರ್ ಅವರನ್ನು ಸದಾ ಆದರ್ಶವನ್ನಾಗಿ ಇಟ್ಟುಕೊಳ್ಳಿ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಸುಮಂಗಲಾ ಎಸ್ ಬಂಟ್, ಸಂಘಟನೆಯ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ್ ನಾರಾಯಣ ಮುಕ್ರಿ, ಅಧ್ಯಕ್ಷ ನಾರಾಯಣ ಶಿವು ಮುಕ್ರಿ, ಮಹಿಳಾ ಅಧ್ಯಕ್ಷೆ ಶೋಭಾ ಪ್ರಭಾಕರ್ ಮುಕ್ರಿ, ಸುರೇಶ್ ವಡ್ಡರ್, ಅಕ್ಬರ್ ಇನಾಮದಾರ್, ಮೆಹಬೂಬ ಇನಾಮದಾರ್, ಹುಸೇನ್ ನಾಗೂರ್, ಶರತ್ ಛಲವಾದಿ, ಮಹ್ಮದ್ ಡಿ ನಾಗೂರ್, ಶಿವಾನಂದ ಮುಕ್ರಿ, ಚಂದ್ರಹಾಸ ಮುಕ್ರಿ ಪ್ರಭಾಕರ್ ಮುಕ್ರಿ, ಶಿಕ್ಷಕರಾದ ಸ್ಮಿತಾ ಸುನೀಲ್ ಹೊಸಕಟ್ಟಾ, ದೀಪಾ ಎ ಗೌಡ ಉಪಸ್ಥಿತರಿದ್ದರು.