ಅಂಬೇಡ್ಕರ್, ಜಗಜೀವನ್‌ ರಾಮ್ ಜಯಂತಿ ಸರಳವಾಗಿ ಆಚರಿಸಲು ನಿರ್ಧಾರ

ಬೆಂಗಳೂರು, ಏ. 2,ಕೋವಿಡ್- 19 ಹಿನ್ನೆಲೆಯಲ್ಲಿ ಭಾರತರತ್ನ ಡಾ. ಬಿಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಜಯಂತಿಯನ್ನು ಸರಳವಾಗಿ ಆಚರಿಸಲು ಸರ್ಕಾರ ಸೂಚಿಸಿದೆ. ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಏ. 5ರಂದು  ನಡೆಯಬೇಕಿರುವ ಬಾಬು ಜಗಜೀವನ್ ರಾಮ್ ಅವರ 113ನೇ ಜನ್ಮ ದಿನಾಚರಣೆಯನ್ನು ತುಂಬಾ ಸರಳವಾಗಿ ಆಚರಿಸಲು ಸಮಾಜ ಕಲ್ಯಾಣ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.ಏ.14ರಂದು ನಡೆಯಬೇಕಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆಯನ್ನು ಸಹ ಹೆಚ್ಚು ಜನಸಂದಣಿ ಇಲ್ಲದಂತೆ ತುಂಬಾ ಸರಳವಾಗಿ ಆಚರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ್ ರಾಜ್ಯದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಇಬ್ಬರು ರಾಷ್ಟ್ರ ನಾಯಕರ ಜಯಂತಿಗಳ‌ನ್ನು ಆಚರಿಸುವ ಬಗ್ಗೆ ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಚರ್ಚೆ ನಡೆಸಿದ್ದು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ.ಕೋವಿಡ್-19 ತಡೆಗಟ್ಟಲು ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ರಾಜ್ಯಮಟ್ಟದಲ್ಲೂ ಸರಳವಾಗಿ ಆಚರಿಸುವಂತೆ ನಿರ್ಧರಿಸಲಾಗಿದೆ ಎಂದು ಕುಮಾರ ನಾಯಕ್ ಅವರು ಜಿಲ್ಲಾಧಿಕಾರಿಗಳಿಗೆ ಬರದಿರುವ ಪತ್ರದಲ್ಲಿ ತಿಳಿಸಿದ್ದಾರೆ.