ಬಿಜೆಪಿ ಜೊತೆಗೆ ಮೈತ್ರಿ : ಯಾದವ್ ಪಕ್ಷಕ್ಕೆ ಗುಡ್ ಬೈ

 ಚಂಡೀಗಢ, ಅ 26:   ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ ಜೊತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಲು ಮುಂದಾಗಿರುವ ಜನನಾಯಕ ಜನತಾ ಪಕ್ಷ ಜೆಜೆಪಿಯ ನಿರ್ಧಾರದಿಂದ ತೀವ್ರ ಬೇಸರ, ಅಸಮಾಧಾನಗೊಂಡಿರುವ ಮಾಜಿ ಯೋಧ ತೇಜ್ ಬಹಾದೂರ್ ಯಾದವ್ ಅವರು ಜೆಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿರುದ್ಧ ತೇಜ್ ಸ್ಪರ್ಧೆ ಮಾಡಿ ಸೋತಿದ್ದರು. ಕೈ ಬೆರಳಿನ ಶಾಯಿ ಅಳಿಸುವ ಮುನ್ನವೇ ನಾಟಕೀಯ ಬೆಳವಣಿಗೆ ಮತ್ತು ಪಕ್ಷದ ನಿರ್ಧಾರಕ್ಕೆ ಮನನೊಂದು ಯಾದವ್ ದೂರ ಸರಿದಿದ್ದಾರೆ. ಈ ಹಿಂದೆ ಭಾರತೀಯ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕು ಹಾಕಿ ದೇಶದ ಉದ್ದಗಲಕ್ಕೂ ಮಿಂಚಿನ ಸಂಚಲನಕ್ಕೆ ಮೂಡಿಸಿದ್ದರು. ಇದರ ಪರಿಣಾಮ ಯಾದವ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಹರಿಯಾಣ ವಿಧಾನಸಭಾ ಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ದುಷ್ಯಂತ್ ಚೌಟಾಲಾ ಅವರ ಸಮ್ಮುಖದಲ್ಲಿ ಯಾದವ್ ಅವರು ಜೆಜೆಪಿ ಸೇರಿದ್ದರು. ಹರಿಯಾಣದ ಜನತೆ ತಿರಸ್ಕರಿಸಿರುವ ಬಿಜೆಪಿ ಜೊತೆ ಕೈಜೋಡಿಸುವ ಮೂಲಕ ದುಷ್ಯಂತ್ ಚೌಟಾಲಾ ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ, ಮೋಸ ಮಾಡಿದ್ದಾರೆ, ವಂಚನೆ ಮಾಡಿದ್ದಾರೆ. ಈ ಮೂಲಕ ಜೆಜೆಪಿಯ ಅಸಲಿ ಬಣ್ಣ ಬಯಲಾಗಿದೆ. ಜೆಜೆಪಿ ಬೇರೆಯಲ್ಲ, ಬಿಜೆಪಿ ಬೇರೆಯಲ್ಲ, ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಜನರು ಇದರ ವಿರುದ್ಧ ಸೆಡೆದು ನಿಲ್ಲಬೇಕು. ಈ ಅಪವಿತ್ರ ಮೈತ್ರಿಯನ್ನು ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡಬೇಕೆಂದು ಯಾದವ್ ಒತ್ತಾಯಿಸಿದ್ದಾರೆ.