ರೂಪಕ ಕಥೆಗಾರ : ಡಾ. ಬಸು ಬೇವಿನಗಿಡದ

ಕನ್ನಡದ ಬಹುಮುಖ ಪ್ರತಿಭೆಯ ಸಾಹಿತಿ ಡಾ. ಬಸು ಬೇವಿನಗಿಡದ ಅವರು ಕಥೆ, ಕವನ, ಮಕ್ಕಳ ಸಾಹಿತ್ಯ, ವಿಮರ್ಶೆ ಮತ್ತು ಅನುವಾದದಲ್ಲಿ ತಮ್ಮದೇ ಅದ ಛಾಪು ಮೂಡಿಸಿದವರು. ನಾಡು ಕಂಡ ಪ್ರಮುಖ ಕಥೆಗಾರರಲ್ಲಿ ಬಸು ಕೂಡ ಒಬ್ಬರು. ವೃತ್ತಿ ಪ್ರವೃತ್ತಿ, ಬದುಕು-ಬರಹದಲ್ಲಿ ಸಾಧನೆಯ ಸಿದ್ಧಿ ಅವರದಾಗಿದೆ. ಆಕಾಶವಾಣಿಯಲ್ಲಿ ಹೊಸ ಹೊಸ ಪ್ರತಿಭೆಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದವರು. ಅವರು ಬಡವರ ಹಾಗೂ ಶೋಷಿತರ ಪರವಾಗಿದ್ದು, ಅನೇಕ ಸೃಜನಾತ್ಮಕ ಕೃತಿಗಳ ಮೂಲಕ ಬಡವರ ಧ್ವನಿಯನ್ನು ಆಕಾಶವಾಣಿಯಲ್ಲಿ ಬಿಂಬಿಸಿದವರು. 

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರಾದ ಬಸು ಬೇವಿನಗಿಡದ ಅವರು 1964ರ ಜುಲೈ 12ರಂದು ಜನಿಸಿದರು. ತಂದೆ ಪಂಚಪ್ಪ, ತಾಯಿ ಶಿವವ್ವ. ಕಡುಬಡತನದ ಬೇಗೆಯಲ್ಲೇ ಅವರು ಎಸ್‌.ಎಸ್‌.ಎಲ್‌.ಸಿ. ತನಕ ಮುನವಳ್ಳಿಯಲ್ಲೇ ಓದಿದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯಲ್ಲಿ ಗುರುಗಳಾದ ಜೋಗಣ್ಣನವರ, ಹೆಬಸೂರ, ಚವಡಾಪುರ, ಬಡಿಗೇರ, ಹನಸಿ ಮುಂತಾದವರು ಬಸು ಅವರ ಮೇಲೆ ಪ್ರಭಾವ ಬೀರಿದರು. ನಂತರ ಧಾವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿಯನ್ನು ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವಿಯನ್ನು ಇಂಗ್ಲೀಷ ಸಾಹಿತ್ಯದಲ್ಲಿ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಡಾ.ವೀಣಾ ಶಾಂತೇಶ್ವರ, ಡಾ.ಗಿರಡ್ಡಿ ಗೋವಿಂದರಾಜ, ಡಾ.ಸಿ.ವಿ.ವೇಣುಗೋಪಾಲ, ಡಾ.ರಾಜಶೇಖರ ಮನಸೂರ, ಪ್ರೊ. ಎಂ.ಎಂ.ಕಲಬುರ್ಗಿ, ಡಾ. ಬುದ್ದಣ್ಣ ಹಿಂಗಮಿರೆ, ಪ್ರೊ. ಎಚ್‌.ಎಂ.ಬೀಳಗಿ, ಡಾ.ಮುಳಗುಂದ ಮುಂತಾದ ಪ್ರಾಧ್ಯಾಪಕರು ತಮ್ಮ ಬೆಳವಣಿಗೆಯಲ್ಲಿ ಸಕಾರಾತ್ಮಕ ಪಾತ್ರವಹಿಸಿದರೆಂದು ಬಸು ಅವರು ನೆನಪಿಸಿಕೊಳ್ಳುವರು.  

ಕುಂಬಾರಿಕೆಯ ಕೃಷಿ ಕುಟುಂಬದಲ್ಲಿ ಏಳು ಜನ ಒಡಹುಟ್ಟಿದವರು. ಮನೆತನದ ಕುಂಬಾರಿಕೆ ವೃತ್ತಿಯಿಂದ ಬಹಳಷ್ಟು ಸಾಧಿಸಲು ಸಾಧ್ಯವಿಲ್ಲವೆಂದು ತಿಳಿದುಕೊಂಡಿದ್ದ ಅವರ ತಂದೆ ಕಷ್ಟಪಟ್ಟು ನಾಲ್ಕು ಎಕರೆ ನೀರೆ ಇಲ್ಲದ ಒಣ ಭೂಮಿಯನ್ನು ಹಿಡಿದು ಇಬ್ಬರು ಮಕ್ಕಳನ್ನು ಕೃಷಿಗೆ ಹಚ್ಚಿದರು. ಬಸು ಪ್ರಥಮ ಪಿ.ಯು.ಸಿ. ಓದುತ್ತಿರುವಾಗಲೇ ತಂದೆಯವರು ತೀರಿಕೊಂಡರು. ಅವ್ವ, ಅಪ್ಪ, ಅಣ್ಣಂದಿರು, ಸೋದರಮಾವಂದಿರು ಹಾಗೂ ಸ್ನೇಹಿತರ ನೆರವಿನಿಂದ ಅವರು ಇಂಗ್ಲೀಷ  ಸಾಹಿತ್ಯದಲ್ಲಿ ಬಿ.ಎ., ಎಂ.ಎ. ಹಾಗೂ ಬೇಂದ್ರೆ ಕಾವ್ಯದ ಮೇಲೆ ಪಿಹೆಚ್‌.ಡಿ. ಮುಗಿಸುವಂತಾಯಿತೆಂದು ಬಸು ಬೇವಿನಗಿಡದ ಅವರು ಕೃತಜ್ಞತೆಯಿಂದ ನೆನೆಯುತ್ತಾರೆ. ಬಸು ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದ ವಿಶ್ವಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಒಂದು ವರ್ಷ ಕಾಲ ಇಂಗ್ಲೀಷ ಉಪನ್ಯಾಸಕರಾಗಿ ಕೆಲಸ ಮಾಡಿರುವರು. ಅವರು ಇಂಗ್ಲೀಷ್ ಉಪನ್ಯಾಸಕರಾಗಿ ಕೆಲಸ ಮಾಡಿರುವದು ಅನೇಕರಿಗೆ ಗೊತ್ತಿಲ್ಲ. ಆದರೆ ರಾಮದುರ್ಗದ ಸ್ನೇಹಿತರು ಅವರನ್ನು ಎಂದಿಗೂ ಮರೆತಿಲ್ಲ. ನಂತರ 1989ರಲ್ಲಿ ಬಸು ಬೇವಿನಗಿಡದ ಅವರು ಕಲಬುರ್ಗಿ ಆಕಾಶವಾಣಿಯನ್ನು ಸೇರಿದರು. ಕಲಬುರ್ಗಿ, ಧಾರವಾಡ, ಕಾರವಾರ, ವಿಜಯಪುರ ಹೀಗೆ ವಿವಿಧ ಸ್ಥಳಗಳಲ್ಲಿ 33 ವರ್ಷಗಳಷ್ಟು ಸುದೀರ್ಘ ಸೇವೆಸಲ್ಲಿಸಿ, ಸಧ್ಯ ಧಾರವಾಡದ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕಾಶವಾಣಿಯಲ್ಲಿ ಅನೇಕ ಹೊಸ ಹೊಸ ಲೇಖಕರನ್ನು ಮುನ್ನಲೆಗೆ ತರುವ ಮೂಲಕ ಹೊಸ ತಲೆಮಾರನ್ನು ಸೃಷ್ಟಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.  

ಕನ್ನಡದ ಒಬ್ಬ ಮುಖ್ಯ ಕಥೆಗಾರರಾಗಿರುವ ಡಾ.ಬಸು ಬೇವಿನಗಿಡದ ಅವರು ಕಥೆ, ಕವನ, ವಿಮರ್ಶೆ, ಕಾದಂಬರಿ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ 30ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳು ಬುಟ್ಟಿ, ನೆರಳಿಲ್ಲದ ಮರ ಕಥಾ ಸಂಕಲನಗಳು, ಕನಸು, ಇಳೆಯ ಅರ್ಥ ಕವನ ಸಂಕಲನಗಳು, ಹಕ್ಕಿಗಮನದ ಹಾದಿ, ಕಲ್ಲು ಸಕ್ಕರೆ, ಕಾಲದ ಕನ್ನಡಿ, ಬೆಳಕ ತೋರಣ, ಶತಮಾನ ಕವಿ ಬೇಂದ್ರೆ, ಬೇಂದ್ರೆ ನಿಸರ್ಗ ಕಾವ್ಯ, ಕನಕದಾಸರು ಮತ್ತು ಮಧುರ ಚೆನ್ನರು, ಸನದಿ ವ್ಯಕ್ತಿತ್ವ ವಿಮರ್ಶೆ ಸಂಕಲನಗಳು, ನಾಳೆಯ ಸೂರ್ಯ, ಓಡಿ ಹೋದ ಹುಡುಗ, ಬೀಳದ ಗಡಿಯಾರ ಮಕ್ಕಳ ಕಾದಂಬರಿಗಳು, ಕಮಲಾದೇವಿ ಚಟ್ಟೋಪಾಧ್ಯಾಯ, ಹಸಿರು ಕಾಡಿನ ಗೆಳೆಯರು, ನಮ್ಮ ಮರ, ಸ್ವಾತಂತ್ರ ಚಳುವಳಿ ಹಾಗೂ ಭಾರತೀಯ ಮುಸ್ಲೀಂರು, ಸಮಕಾಲೀನ ಭಾರತೀಯ ಕಥೆಗಳು, ಅಮೇರಿಕೆಯ ಲೇಖಕಿ ಫ್ಲ್ಯಾನರಿ ಓ ಕಾನರ್ ಅವರ ಕಥೆಗಳ ಅನುವಾದ ದಕ್ಕದ ಕಾಡು ಅನುವಾದ ಕೃತಿಗಳನ್ನು ಬೇವಿನಗಿಡದ ಅವರು ಕನ್ನಡಮ್ಮನ ಮಡಲಿಗೆ ಅರ​‍್ಿಸಿರುವರು.  

ಬಸು ಅವರು ಒಬ್ಬ ಸಮರ್ಥ ಕಥೆಗಾರರಾಗಿರುವಂತೆಯೇ ಒಬ್ಬ ಒಳ್ಳೆಯ ಕವಿ ಮತ್ತು ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. 1995ರಲ್ಲಿ ಅವರ ಮೊದಲ ಕವಿತಾ ಸಂಕಲನ ‘ಕನಸು’ ಪ್ರಕಟವಾಯಿತು. ‘ಇಳೆಯ ಅರ್ಥ’ ಎನ್ನುವ ಕವನ ಸಂಕಲನ 2010ರಲ್ಲಿ ಪ್ರಕಟವಾಯಿತು. ಅವರ ನೆರಳಿಲ್ಲದ ಮರ ಕಥಾ ಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿದ್ದು, ಬಹುತೇಕ ಕಥೆಗಳು ಗ್ರಾಮ್ಯ ಸೊಗಡನ್ನು ಹೊಂದಿ ಬದಲಾಗುತ್ತಿರುವ ಗ್ರಾಮೀಣ ಸಮಾಜದ ವಿವಿಧ ಆಯಾಮಗಳ ಒಳ ಹೊರಗನ್ನು ಕಟ್ಟಿ ಕೊಡುತ್ತವೆ. ಕಥೆಗಳಲ್ಲಿನ ಶಿಲವಲಿಂಗಪ್ಪ, ರುದ್ರವ್ವ, ಪಾರಕ್ಕ ಅಡಿವೆವ್ವ, ಮಹಾದೇವ, ಪುಂಡಲೀಕದಂತಹ ಪಾತ್ರಗಳು ಓದುಗನ ಮನಸ್ಸಿಗೆ ಇಳಿದು ಬಹಳಷ್ಟು ದಿನ ಕಾಡುತ್ತವೆ. ಅವರ ‘ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿಯು 13 ರಿಂದ 15ರ ಹರೆಯದ ಮಕ್ಕಳ ಸುತ್ತ ಹೆಣೆದಿದೆ. ಮಕ್ಕಳ ಮನೋಭಾವನೆಗಳನ್ನು ಅರಿತು ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಅವರನ್ನು ಅವರ ಭಾವನೆಗಳನ್ನು ಸೂಕ್ಷ್ಮವಾಗಿ ಬದಲಾಯಿಸುವ ಪ್ರಸಂಗವನ್ನು ಇಲ್ಲಿ ಕಾದಂಬರಿಕಾರರು ಕಟ್ಟಿ ಕೊಡುತ್ತಾರೆ. ಬಸು ಅವರು ಅನುವಾದಿಸಿರುವ ಪ್ಲ್ಯಾನರಿ ಓಕಾನರ್ ಅವರ ಐದು ಕಥೆಗಳ ಸಂಕಲನ ‘ದಕ್ಕದ ಕಾಡು’ ಸಾಹಿತ್ಯಾಭ್ಯಾಸಿಗಳು ಹಾಗೂ ಅನುವಾದಕರು ಗಮನಿಸಬೇಕಾದ ಕೃತಿ. ಇಂಗ್ಲೀಷ ವಾಕ್ಯಗಳ ನೆರಳು ಬೀಳದ ಹಾಗೆ ಕನ್ನಡದ ನುಡಿಗಟ್ಟಿಗೆ ಹೊಂದುವ ಹಾಗೆ ಅನುವಾದಗೊಂಡಿರುವ ಕಥೆಗಳಿಂದ ಓದುಗರು ಸಂತೋಷಪಡುತ್ತಾರೆ. ಓ ಕಾನರ್ ಕಥೆಗಳು ಬಹುಪಾಲು ದಕ್ಷಿಣ ಅಮೇರಿಕಾದ ದಕ್ಷಿಣ ಪ್ರಾಂತಗಳಲ್ಲೇ ನಡೆಯುತ್ತವೆ. ಬಸು ಅವರು ಈ ಅನುವಾದಗಳ ಮೂಲಕ ಅತ್ಯಂತ ಸಮರ್ಥ ಅನುವಾದಕರೆಂದು ಸಾಬೀತುಪಡಿಸಿದ್ದಾರೆ. 

ಪ್ರಸಿದ್ಧ ವಿಮರ್ಶಕರಾದ ಪ್ರೊ. ಟಿ.ಪಿ.ಅಶೋಕ ಅವರು ಬಸು ಅವರ ಕಥೆಗಳನ್ನು ವಿಮರ್ಶಿಸುತ್ತ ‘ಆಧುನಿಕತೆಯ ಪ್ರವೇಶದಿಂದಾಗಿ ಗ್ರಾಮೀಣ ಬದುಕು ಪಲ್ಲಟಗೊಳ್ಳುವ ಪರಿ ಮತ್ತು ಪರಿಣಾಮಗಳ ಶೋಧ ಬಸು ಬೇವಿನಗಿಡದ ಅವರ ಕಥೆಗಳ ಒಂದು ಪ್ರಧಾನ ಆಶಯವಾಗಿದೆ. ನಿರ್ದಿಷ್ಟ ಗೊತ್ತು ಗುರಿಯಿಲ್ಲದೆ ನಾಗಾಲೋಟದಲ್ಲಿ ಓಡುತ್ತಿರುವ ಸಮಕಾಲೀನ ನಾಗರೀಕತೆಯ ಉಪಭೋಗ ಸಂಸ್ಕೃತಿಯ ಆಮಿಷ-ಆಕರ್ಷಣೆಗಳನ್ನು ಕಾಣಿಸುತ್ತ ಮನುಷ್ಯರ ಅಧಃಪತನಕ್ಕೆ ಕಾರಣವಾಗುತ್ತಿರುವ ವಿದ್ಯಮಾನಗಳನ್ನು ಚಿತ್ರಿಸುವರು ಬಸು ಬೇವಿನಗಿಡದ ಅವರ ಕಥಾ ಸಾಹಿತ್ಯದ ಒಂದು ಮುಖ್ಯ ಉದ್ದೇಶ ಎಂದು ಹೇಳಿರುವದು ತುಂಬಾ ಅರ್ಥಪೂರ್ಣವಾಗಿದೆ. ಅದೇ ರೀತಿ ಲೇಖಕ ವಿವೇಕ ಶಾನಭಾಗ ಅವರು ಬಸು ಬೇವಿನಗಿಡದ ಅವರ ಕಥೆಗಳನ್ನು ಅವಲೋಕಿಸುತ್ತ ಸಾಮಾಜಿಕ ಸನ್ನಿವೇಶಗಳನ್ನು ಕೌಟುಂಬಿಕ ಚೌಕಟ್ಟಿನಲ್ಲಿ ತುಂಬ ಸೊಗಸಾಗಿ ಕಟ್ಟಿಕೊಡುವ ವಿಶಿಷ್ಟತೆಯನ್ನು ಬಸು ಅವರಲ್ಲಿ ಕಾಣುತ್ತಾರೆ. ಅವರು ಅನುವಾದಿಸಿರುವ ‘ಕಪ್ಪು ಬಿಳುಪು’ ದಂತಹ ಕಥೆಗಳು ಕನ್ನಡ ಓದುಗರಿಗೆ ಲಂಕೇಶರ ‘ಮುಟ್ಟಿಸಿಕೊಂಡವನು’ ಕಥೆಯು ನೆನಪಿಗೆ ಬರಬಹುದು. ದಲಿತ ಸಾಹಿತ್ಯದ ಆಶಯಗಳಂಥದೇ ಆಶಯ ಅಮೇರಿಕನ್ ಕಥೆಯಲ್ಲೂ ವರ್ಣದ್ವೇಷದ ಹಿನ್ನೆಲೆಯಲ್ಲಿ ರೂಪ ಪಡೆಯುವ ಬಗೆ ಮನಸಿಗೆ ಬರಬಹುದು. ಹೀಗೆ ಪ್ಲ್ಯಾನರಿ ಓ ಕಾನರ್ ಕಥೆಗಳು ಕನ್ನಡದ ಕಥೆಗಳ ನೆನಪಿನ ಜೊತೆಗೆ ಬೆಸೆದುಕೊಳ್ಳುವ ಗುಣವನ್ನು ಹೊಂದಿವೆ. 

ದಿಲ್ಲಿಯ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್‌ದಂತಹ ಪ್ರಸಿದ್ಧ ಸಂಸ್ಥೆಗಳಿಂದ ಸಹ ಡಾ.ಬೇವಿನಗಡಿದ ಅವರ ಕೆಲವು ಅನುವಾದ ಪುಸ್ತಕಗಳು ಪ್ರಕಟವಾಗಿವೆ. ಶತಮಾನದ ಕವಿ ಬೇಂದ್ರೆ ಎನ್ನುವ ವರಕವಿ ಬೇಂದ್ರೆಯವರನ್ನು ಕುರಿತು ಅವರ ಬರೆದಿರುವ ಗದ್ಯ ಕೃತಿ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಷ್ಟ್‌ನಿಂದ ಪ್ರಕಟಗೊಂಡಿದೆ. ಓಡಿ ಹೋದ ಹುಡುಗ ಎನ್ನುವ ಅವರ ಕಾದಂಬರಿಗೆ 2021ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ದೊರೆಯಿತು. ಅದೇ ಕಾದಂಬರಿಗೆ 2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದೆ. ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಂಗಿ ವೆಂಕಟರಾಮಯ್ಯ ದತ್ತಿ ಪ್ರಶಸ್ತಿ, ಹಾಸನದ ಅಡ್ವೈಸರ್ ಪತ್ರಿಕೆಯ ಪುರಸ್ಕಾರ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಸಹ ಓಡಿ ಹೋದ ಹುಡುಗ ಕೃತಿಗೆ ಸಂದಿವೆ. ಬೀಳದ ಗಡಿಯಾರ ಎನ್ನುವ ಅವರ ಕೃತಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪುರಸ್ಕಾರ ಲಭಿಸಿದೆ. ಅವರ ಅನುವಾದ ಕೃತಿ ಸಮಕಾಲೀನ ಭಾರತೀಯ ಕಥೆಗಳು ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ 2014ರಲ್ಲಿ ದೊರಕಿದೆ. ಬಸು ಬೇವಿನಗಿಡದ ಅವರದು ಎಂದು ಉತ್ಸಾಹ ಕಳೆದುಕೊಳ್ಳದ ಗ್ರಾಮೀಣ ದನಿ. ಹೆಣ್ಣಿನ ಸಂವೇದನೆ ಮತ್ತು ಅವಳ ಸಹನೆಯನ್ನು ಬಸು ಅವರು ತಮ್ಮ ಕಥೆಗಳಲ್ಲಿ ತುಂಬ ಚೆನ್ನಾಗಿ ಕಟ್ಟಿಕೊಡುತ್ತಾರೆ ಎಂದು ಡಾ.ವಿನಯ ವಕ್ಕುಂದ ಅವರು ಅಭಿಪ್ರಾಯಪಡುತ್ತಾರೆ.  

2015, 2016 ಮತ್ತು 2020ರಲ್ಲಿ ರಾಜ್ಯ ಮಟ್ಟದ ಆಕಾಶವಾಣಿ ಸ್ಪರ್ಧೆಗಳಲ್ಲಿ ನಾಲ್ಕು ಸಲ ಪ್ರಥಮ ಬಹುಮಾನಗಳನ್ನು ಪಡೆದುಕೊಂಡಿದ್ದರೆ. 2017 ಮತ್ತು 2018ರಲ್ಲಿ ರಾಷ್ಟ್ರಮಟ್ಟದ ಆಕಾಶವಾಣಿ ಸ್ಪರ್ಧೆಗಳಲ್ಲಿ ಸತತ ಎರಡು ಸಲ ಪ್ರಥಮ ಪುರಸ್ಕಾರ ಪಡೆದ ಹೆಗ್ಗಳಿಕೆಗೂ ಬಸು ಬೇವಿನಗಿಡದ ಅವರು ಪಾತ್ರರಾಗಿದ್ದಾರೆ. ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬಸು ಅವರು ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಆಕಾಶವಾಣಿಯಲ್ಲಿ ಅವಕಾಶ ನೀಡಿ, ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತಃ ಸತ್ಯ. ಅದಕ್ಕೆ ಸದಾ ನಗು ಮೊಗದ ಈ ಭಾವಜೀವಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ವಿಶ್ವಾಸ ಹೀಗಾಗಿ ಬಸು ಅವರು ಬಹಳಷ್ಟು ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ. 1991ರಲ್ಲಿ ಬಸು ಅವರು ದಾವಣಗೆರೆ ಜಿಲ್ಲೆಯ ಹೊನ್ನಳಿಯ ನ್ಯಾಮತಿಯ ಉಮಾ ಅವರನ್ನು ವಿವಾಹವಾದರು. ಅವರಿಗೆ ಈರ‌್ವರೂ ಮಕ್ಕಳು ಮಗಳು ಚೈತ್ರಾ, ಮಗ ರಾಕೇಶ. ಮಗಳು ಚೈತ್ರಾ ‘ಕರೆಯುವದು ಕೋಗಿಲೆ’ ಎನ್ನುವ ಕವನ ಸಂಕಲನ ಪ್ರಕಟಿಸಿದ್ದು, ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಧಾರವಾಡದಲ್ಲಿ ಉಪನ್ಯಾಸಕಿಯಾಗಿದ್ದಾರೆ. ಅಲ್ಲದೇ ರಾಕೇಶ ಬಿ.ಇ. ಮುಗಿಸಿಕೊಂಡು ಬೆಂಗಳೂರಿನಲ್ಲಿ ಸಾಪ್ಟವೇರ್ ಉದ್ಯೋಗಿಯಾಗಿದ್ದಾರೆ.  

ಡಾ. ಬಸು ಬೇವಿನಗಿಡದ ಅವರ ಸಾಹಿತ್ಯ ಸಾಧನೆಯ ಹಿಂದೆ ಅವಿರತ ದುಡಿಮೆ ಅಡಗಿರುವುದನ್ನು ಕಾಣಬಹುದು. ಅಷ್ಟೇನೂ ಸ್ಥಿತಿವಂತವಲ್ಲದ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಬಸು ಅವರು ತಮ್ಮ ಭಾಷಾ ಪ್ರೌಢಿಮೆ ಮತ್ತು ಕಲ್ಪನಾ ಶಕ್ತಿಯ ನೆರವಿನಿಂದ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದುದನ್ನು ಸಾಧಿಸಿದ್ದಾರೆ. ಹಾಗೆಯೇ ಅನೇಕರನ್ನು ಬರೆಯಲು ತೊಡಗಿಸಿ ಅವರಲ್ಲಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ ಅವರು ಗ್ರಾಮೀಣ ಹಾಗೂ ಮಾನವೀಯ ಸಂವೇದನೆಗಳನ್ನು ಮುನ್ನೆಲೆಗೆ ತರುವ ಮೂಲಕ ಮತ್ತು ಅವುಗಳನ್ನು ತುಂಬ ಪರಿಣಾಮಕಾರಿಯಾಗಿ ಚಿತ್ರಿಸುವ ಮೂಲಕ ಒಬ್ಬ ಯಶಸ್ವಿ ಲೇಖಕರಾಗಿ ಹೆಸರು ಮಾಡಿದ್ದಾರೆ. ಸಂಪರ್ಕಿಸಿ : 9448218152 

- * * * -