ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು 31: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋಟರ್್ ರದ್ದುಗೊಳಿಸಿದೆ. 

   ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ   ಕೋರಿ ಪ್ರಭಾಕರ ಭಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಈ ಆದೇಶ ನೀಡಿತು.  

  ಪ್ರಭಾಕರ ಭಟ್ ಪರ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಐಪಿಸಿ 153 (ಎ) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸುವ ಮುನ್ನ ರಾಜ್ಯ ಇಲ್ಲವೇ ಕೇಂದ್ರ ಸರ್ಕಾರದಿಂದ ಪೂವರ್ಾನುಮತಿ ಪಡೆಯುವುದು ಕಡ್ಡಾಯ.ಆದರೆ, ದೂರುದಾರರು ಈ ನಿಯಮ ಪಾಲಿಸಿಲ್ಲ ಎಂದರು.  ಜೊತೆಗೆ, ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ನೀಡಿಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಅರ್ಜಿದಾರರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರವಾಗಿದೆ. ಆದ್ದರಿಂದ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು. ಈ ವಾದವನ್ನು ನ್ಯಾಯಪೀಠ ಪುರಸ್ಕರಿಸಿತು. 

ಪ್ರಕರಣವೇನು?  

 ಬಂಟ್ವಾಳ ತಾಲ್ಲೂಕಿನ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿ 2018ರ ಏಪ್ರಿಲ್ 6 ರಂದು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆಯದೆ ಸಭೆ ನಡೆಸಿದ್ದ  ಪ್ರಭಾಕರ ಭಟ್,  ' ಧರ್ಮವಿರೋಧಿ ಹಾಗೂ ಗೋಭಕ್ಷಕ ಸರ್ಕಾರವನ್ನು ಕಿತ್ತೊಗೆಯಿರಿ' ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದು ಕೋಮುವಾದಿ ಹೇಳಿಕೆಯಾಗಿದ್ದು, ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ನಡೆಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ  ಎಂದು ಆರೋಪಿಸಿ ಡಾ.ಯೋಗೀಶ್ ಎಸ್.ಬಿ. ಎಂಬುವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಬಂಟ್ವಾಳ ಜೆಎಂಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.