ದಾವಣಗೆರೆ, ಮೇ 10,ಕಳೆದ 15 ತಿಂಗಳುಗಳಿಂದ ಬಾಕಿ ಇರುವ ಸ್ಟೈಫಂಡ್ ಗಳನ್ನು ಪಾವತಿಸಿದ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ದಾವಣಗೆರೆಯ ಚಿಗಟೇರಿ ಸರ್ಕಾರಿ ಆಸ್ಪತ್ರೆಯ ಸ್ನಾತಕೋತ್ತರ ಪದವೀಧರ ಮತ್ತು ತರಬೇತಿ ಪಡೆಯುತ್ತಿರುವ ವೈದ್ಯರು ಸೇರಿ 200ಕ್ಕೂ ಹೆಚ್ಚು ಕೊರೋನಾ ಯೋಧರು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ತೊಡಗುವ ಬೆದರಿಕೆಯೊಡ್ಡಿದ್ದಾರೆ.
ಯುಎನ್ಐ ಸುದ್ದಿಸಂಸ್ಥೆಗೆ ಈ ಮಾಹಿತಿ ನೀಡಿರುವ ಡಾ.ಹಿತಾ ಶಿವಯೋಗಿ, ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ಪಿಜಿ ಮತ್ತು ಇಂಟರ್ನ್ ವೈದ್ಯರು ಹಲವು ಮನವಿಗಳನ್ನು ಸಲ್ಲಿಸಿದ್ದರೂ, ಇಲ್ಲಿಯವರೆಗೆ ಅವರಿಗೆ ಸ್ಟೈಫಂಡ್ ಗಳನ್ನು ಪಾವತಿಸಿಲ್ಲ ಎಂದು ಆರೋಪಿಸಿದರು. ಆದರೆ ಆರೋಗ್ಯ ಇಲಾಖೆ ಈ ವೈದ್ಯರ ವೇತನದ ಹೊರೆಯನ್ನು ಜೆಜೆಎಂ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯೇ ವಹಿಸಿಕೊಳ್ಳಬೇಕು ಎಂದು ಸಮರ್ಥನೆ ನೀಡಿದೆ. ಕಾಲೇಜು ಮತ್ತು ಸರ್ಕಾರದ ತಿಕ್ಕಾಟದ ನಡುವೆ ತರಬೇತಿ ಪಡೆಯುತ್ತಿರುವ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೆಜೆಎಂ ಕಾಲೇಜಿನಲ್ಲಿ ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿ ವೈದ್ಯರಿಗೆ ನಿಯಮಿತವಾಗಿ ವೇತನ ಪಾವತಿಸಲಾಗುತ್ತಿದೆ. ಆದರೆ, ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ತಾರತಮ್ಯ ತೋರಲಾಗುತ್ತಿದೆ ಎಂದು ಅವರು ಆರೋಪಿಸಿದರು. ಸದ್ಯ ಕೊರೋನಾ ಪೀಡಿತ ಕೆಂಪು ವಲಯವಾಗಿರುವ ದಾವಣಗೆರೆಯಲ್ಲಿ ಹೋರಾಡುತ್ತಿರುವ ವೈದ್ಯರಿಗೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಗ್ಲೌಸ್ ಗಳನ್ನು ಕೂಡ ಪೂರೈಸುತ್ತಿಲ್ಲ ಎಂದು ಕಿಡಿಕಾರಿದರು.
ಇದರಿಂದ ಸುಮಾರು 230 ತರಬೇತಿ ವೈದ್ಯರು ಮುಷ್ಕರದಲ್ಲಿ ತೊಡಗಲು ನಿರ್ಧರಿಸಿದ್ದೇವೆ. ಈ ಸಂಬಂಧ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು. ಇತ್ತೀಚೆಗೆ ಈ ವೈದ್ಯರು ಮೇಣದ ಬತ್ತಿಯ ಪ್ರತಿಭಟನೆಯನ್ನು ಕೂಡ ಕೈಗೊಂಡಿದ್ದರು.