ಒಲವು ಇನ್ನೂನು ಬೇಕಾಗಿದೆ ಎಂಬ ಭಾವ ಹೊರಸೂಸುವ ಅಕ್ಷತಾ ಗಜಲ್

ನೀನು ನೆನಪಿಸಿಕೊಂಡ ಕ್ಷಣ ಹೇಗೆ ಹಾಜರಾಗಲಿ ಹೇಳು 

ನಿನ್ನ ಕರೆಗೆ ಕಾತರಿಸಿದೆ ಮನ ಹೇಗೆ ಸುಮ್ಮನಿರಲಿ ಹೇಳು 

ಸದಾ ಪ್ರೀತಿಯ ಧ್ಯಾನದಲಿ ಚಡಪಡಿಸುವಂತೆ ಮಾಡುವ ಸಾಲುಗಳನ್ನು ಬರೆಯುವ ಅಕ್ಷತಾ ಕೃಷ್ಣಮೂರ್ತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೇಲೇಕೇರಿ ಗ್ರಾಮದವರು. ಸದ್ಯಕ್ಕೆ ಜೋಯಿಡಾ ತಾಲೂಕಿನ ಅಣಶಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕವಿತೆ, ಕಥೆ, ಗಜಲ್, ವಿಮರ್ಶೆ, ಅಂಕಣ ಬರಹ, ವ್ಯಕ್ತಿಚಿತ್ರಣ ಮುಂತಾದ ಸಾಹಿತ್ಯಿಕ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ‘ಕರಾವಳಿ ಮುಂಜಾವು’ ಪತ್ರಿಕೆಗೆ ಎರಡು ವರ್ಷಗಳಿಂದ ನಿರಂತರವಾಗಿ ಅಂಕಣ ಬರಹಗಳನ್ನು ಬರೆದಿದ್ದಾರೆ. ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ದೂರದರ್ಶನ ಚಂದನ ಹಾಗೂ ಆಕಾಶವಾಣಿಯ ಕವಿಗೋಷ್ಠಿಗಳಲ್ಲಿಯೂ ಕವಿತೆ ವಾಚಿಸಿದ್ದಾರೆ. ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಪ್ರಸ್ತುತ ‘ತುಷಾರ’ ಮಾಸಪತ್ರಿಕೆಗೆ ‘ಇಸ್ಕೂಲು’ ಅಂಕಣ ಬರೆಯುತ್ತಿದ್ದಾರೆ. ಹನ್ನೆರಡು ದಂಡೆ ಬೆಲ್ಲ, ಕೋಳ್ಗಂಬ, ನಾನು ದೀಪ ಹಚ್ಚಬೇಕೆಂದಿದ್ದೆ... ಪ್ರಕಟಿತ ಕವನ ಸಂಕಲನಗಳು. ಹಾಲಕ್ಕಿ ಒಕ್ಕಲಿಗರು-ಒಂದು ಜನಾಂಗೀಯ ಅಧ್ಯಯನ, ಮಧುರ ಚೆನ್ನ-ವ್ಯಕ್ತಿ ಚಿತ್ರಣ, ಕೇದಿಗೆಯ ಕಂಪು-ವಿಮರ್ಶಾ ಕೃತಿ, ಹಾಲಕ್ಕಿ ಕೋಗಿಲೆ-ಸಂಪಾದಿತ ಕೃತಿ ಇವರ ಇತರೆ ಪ್ರಕಟಿತ ಸಂಕಲನಗಳಾಗಿವೆ. ಕರ್ನಾಟಕ ಜಾನಪದ ಪರಿಷತ್ತಿನ ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಫಿನೀಕ್ಸ್‌ ಕಥಾ ರತ್ನ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ, ಡಾ. ಡಿ. ಎಸ್‌. ಕರ್ಕಿ ಕಾವ್ಯ ಪ್ರಶಸ್ತಿ, ಕಸಾಪ ದತ್ತಿ ಪ್ರಶಸ್ತಿ, ಜಿಲ್ಲಾ ಕಸಾಪದ ಯುವ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ. ಇವರು ಬರೆದ ಗಜಲ್‌ನ ಓದು ಮತ್ತು ಅವಲೋಕನ ನಿಮಗಾಗಿ. 

                                                           ಗಜಲ್ 


ನಿನ್ನ ಮುಂಗೈ ಮೇಲೆ ನನ್ನ ಹೆಸರು ಬರೆಯುವಾಸೆ ಹೇಗೆ ಬರೆಯಲಿ ಹೇಳು 

ನಿನ್ನ ಗಲ್ಲ ಕುಕ್ಕುವ ಮುಂಗುರುಳು ಸರಿಸುವಾಸೆ ಹೇಗೆ ಮುಟ್ಟಲಿ ನೀನೇ ಹೇಳು 


ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆ 

ನಿನ್ನ ಕನಸಿನ ಬಾಗಿಲು ತೆರೆದೇ ಇದೆ ಹೇಗೆ ಮುಚ್ಚಲಿ ನೀನೇ ಹೇಳು 


ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆ ಅರಳಿದೆ 

ನಿನ್ನ ಮೌನ ಧ್ಯಾನ ಇನ್ನೂ ಇಲ್ಲಿಯೇ ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು 


ಸಾಲು ಮರದ ನೆರಳಲಿ ಕೈ ಕೈ ಹಿಡಿದು ನಡೆದಾಡಿದ ನೆನಪು ಕಣ್ಣ ತುಂಬಿದೆ 

ನಿನ್ನ ನಗುವಿನೊಳಗೆ ಇನ್ನೂ ಸಲುಗೆ ಇದೆ ಹೇಗೆ ಮರೆಯಲಿ ನೀನೇ ಹೇಳು 


ಉದುರಿದ ಎಲೆಯೊಂದು ನಗುತ ಸ್ವರ್ಗ ಸುಖ ಅನುಭವಿಸುತಿದೆ ಎನ್ನ ಮುಂದೆ 

ನಿನ್ನ ನೆನಪಿನೊಳಗೆ ನೆನಪಾಗದೇ ‘ಅಕ್ಷತಾ’ ಹೇಗೆ ಇರಲಿ ನೀನೇ ಹೇಳು 

                                         - ಅಕ್ಷತಾ ಕೃಷ್ಣಮೂರ್ತಿ 


‘ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೆ, ಜೊತೆ ಇರದ ಬಾಳ ಜಾತ್ರೆಯಲಿ ಸೊಗಸೇನಿದೆ?’ ಎಂದು ಕವಿ ಸುಬ್ರಾಯ ಚೊಕ್ಕಾಡಿ ಅವರು ಬಾರದ ನಲ್ಲೆಯ ನೀರೀಕ್ಷೆಯಲ್ಲಿ ಹೀಗೆ ಬರೆಯುತ್ತಾರೆ. ‘ನೆನಪೇ ಏಕೆ ಕಾಡುವೆ ನೆನಪೇ ಬಿಡದೇ ಕಾಡುವೆ, ಮನಸು ರಸನಿಮಿಷ ನೆನೆದು ಅದನೇ ಕನವರಿಸುತಿದೆ’ ಎಂದು ಕವಿ ಹೆಚ್‌. ಡುಂಡಿರಾಜ್ ಕಳೆದ ಮಧುರ ನೆನಪುಗಳು ಬಿಡದೇ ಕಾಡುವುದರ ಕುರಿತು ಹೀಗೆ ಬರೆಯುತ್ತಾರೆ. ಪ್ರೀತಿಯ ತೋಳ ತೆಕ್ಕೆಯಲ್ಲಿ ಸಿಕ್ಕ ಮೇಲೆ ವಿರಹ, ಚಡಪಡಿಕೆ, ನೀರೀಕ್ಷೆ, ನೆನಪು ಎಲ್ಲವೂ ಸಹಜ. ಗಜಲ್ ಎಂದರೆ ಸಖ, ಸಖಿಯ ಜೊತೆ ನಡೆಸುವ ಆಪ್ತಸಂವಾದವೂ ಹೌದು. ಹೆಚ್ಚಾಗಿ ಗಜಲ್ ಪ್ರೀತಿ-ಪ್ರೇಮದ ಸಾಲುಗಳಲ್ಲೇ ಮೈಮನಗಳನ್ನು ತೋಯಿಸುತ್ತದೆ. ತನ್ನ ನಲ್ಲೆಯ ಅನುಪಸ್ಥಿತಿಯಲ್ಲಿ, ಆಕೆಯನ್ನೇ ನೆನೆಯುತ್ತ ನಲ್ಲನೊಬ್ಬ ನೆನಪಿಸಿಕೊಂಡ ಹೃದಯದ ಮಧುರಾತಿಮಧುರ ನೆನಪುಗಳನ್ನು ಕವಯಿತ್ರಿ ಅಕ್ಷತಾ ಕೃಷ್ಣಮೂರ್ತಿ ಅವರ ಗಜಲ್ ಹೃದ್ಯವಾಗಿ ತೆರೆದಿಡುತ್ತದೆ. ಒಲವಿನ ಸಾಲುಗಳು ಗಕ್ಕನೆ ಓದುಗನನ್ನು ಹಿಡಿದಿಟ್ಟುಕೊಂಡು ಹೆಜ್ಜೆ ಕೀಳದಂತೆ ಮಾಡುತ್ತವೆ. 

ಒಲವಿನೊಳಗಿನ ಗೆಳತಿಯೊಬ್ಬಳು ನೆನಪುಗಳನ್ನಷ್ಟೇ ಬಿಟ್ಟೆದ್ದು ನಡೆದಿದ್ದಾಳೆ. ಆಕೆಯ ನೆನಪುಗಳಲ್ಲಿಯೇ ಜೀವಿಸುವ ಪ್ರೇಮಿಯೊಬ್ಬ ಆಕೆಯೊಂದಿಗೆ ಕಳೆದ ಸಿಹಿ ಕ್ಷಣಗಳ ಮೆಲುಕು ಹಾಕುತ್ತಲೇ ತನ್ನಷ್ಟಕ್ಕೆ ತಾನು ಹೀಗೆ ಹೇಳಿಕೊಳ್ಳುತ್ತಾನೆ. ನಿನ್ನ ಮೃದುವಾದ ಹಸ್ತಗಳ ಮೇಲೆ ನನ್ನ ಹೆಸರನ್ನು ಬರೆದುಬಿಡಬೇಕೆಂದಿದ್ದೇನೆ, ಹೇಗೆ ಬರೆಯಲಿ? ಎದೆಬಡಿತ ಹೆಚ್ಚಿಸುವ, ಕೆನ್ನೆ ಮೇಲೆ ಪದೆ ಪದೆ ಬೀಳುವ ಮುಂಗುರುಳು ನಯವಾಗಿ ಸರಿಸಬೇಕೆಂದುಕೊಂಡಿದ್ದೇನೆ, ಹೇಗೆ ಮುಟ್ಟಲಿ ನೀನೇ ಹೇಳು? ಎಂದು ಪ್ರಶ್ನಿಸುವ ಪ್ರೇಮಿ ಹಿಂಜರಿಕೆಯ ಜೊತೆ ಭಯವನ್ನೂ ವ್ಯಕ್ತಪಡಿಸುತ್ತಾನೆ. ನಾವಿಬ್ಬರೂ ಜೊತೆಯಾಗಿ ಕಳೆದ ಆ ಒಂದು ದಿನದ ನೆನಪು ಹಸಿರಾಗಿ ಉಳಿದಿದೆ. ಅದೇ ಕ್ಷಣದ ನೆನಪಲ್ಲಿ ಹಗಲಿರುಳು ಕಾಣುವ ನಿನ್ನದೇ ಕನಸು ಕೊನೆಯಾಗುವ ಲಕ್ಷಣಗಳಿಲ್ಲ. ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಅರಳಿ ನಿಂತಿದೆ. ನಿನ್ನದೇ ಮೌನ ಧ್ಯಾನ ಮೈಚಾಚಿ ಮಲಗಿದೆ. ಒಟ್ಟಿಗೆ ಅಲೆದಾಡಿದ ಸಾಲು ಮರದ ನೆರಳು ಕೈಚಾಚಿ ಕರೆದಿದೆ. ನೀ ನಕ್ಕ ದೊಡ್ಡ ನಗೆ ಜೀವಂತಿಕೆ ತುಂಬುತ್ತಿದೆ. ಜಗತ್ತಿನ ಯಾವುದೇ ಪರಿವೆಯಿಲ್ಲದೆ ನಿನ್ನದೇ ನೆನಪ ಮಳೆಯಲ್ಲಿ ತೋಯಿಸಿಕೊಳ್ಳುತ್ತಿರುವಾಗ ಅದರಿಂದ ಹೊರಬರುವ ವಿಧಾನ ಹೇಗೆ ಎಂದು ನೀನೇ ಹೇಳಬೇಕು ಎಂದು ಗಜಲ್ ಅವಳ ಅನುಪಸ್ಥಿತಿಯಲ್ಲಿ ಬೇಯುವ ಪ್ರೇಮಿಯ ತಲ್ಲಣವನ್ನು ಅಭಿವ್ಯಕ್ತಿಸುತ್ತದೆ. 

ಒಲವು ಇನ್ನೂನು ಬೇಕಾಗಿದೆ ಎಂಬ ಭಾವ ಹೊರಸೂಸುವ ಅಕ್ಷತಾ ಕೃಷ್ಣಮೂರ್ತಿ ಅವರ ಗಜಲ್ ಓದುಗರ ಗಮನ ಸೆಳೆಯುತ್ತದೆ, ಪ್ರೀತಿಯ ಮಧುರ ಅನುಭೂತಿ ನೀಡುತ್ತದೆ. ಕವಯಿತ್ರಿಗೆ ವಂದನೆಗಳು.  

- * * * -