ಹಾವೇರಿ, ಮಾ.26 ಕೊರೊನಾ ಸೋಂಕು ಆವರಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಗುರುವಾರ ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.ಬಳಿಕ ಮಾತನಾಡಿದ ಅವರು, ತಾವು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ಕಾರ್ಯಾಚರಣೆ, ವೈದ್ಯಕೀಯ ಸಿಬ್ಬಂದಿಗಳ ಸೇವಾ ನಿರ್ವಹಣೆ ಕುರಿತು ಹಾವೇರಿ ಉಸ್ತುವಾರಿ ಸಚಿವರೂ ಆಗಿರುವ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದೆ. ಅದರಂತೆ ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಹಾಗೂ ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದ್ದೇನೆ ಎಂದರು.
ವೈದ್ಯರು, ದಾದಿಯರು ಹಾಗೂ ಸ್ವಚ್ಛತಾ ಸಿಬ್ಬಂದಿ ಬಹಳ ಉತ್ಸುಕತೆಯಿಂದ ಕೆಲಸ ಮಾಡುತ್ತಿರುವುದು ಕಂಡು ತಮಗೆ ಸಂತಸವಾಗಿದೆ. ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಹಾಗೂ ಆಸ್ಪತ್ರೆಯಲ್ಲಿ ಸೋಂಕಿತರನ್ನು ನೋಡಿಕೊಳ್ಳುತ್ತಿರುವುದಕ್ಕೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದರು.
ಕೊರೊನಾದಂತಹ ಮಹಾಮಾರಿ ರಾಜ್ಯ ಸೇರಿದಂತೆ ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ದೇಶವನ್ನು ಲಾಕ್ ಡೌನ್ ಗೊಳಿಸಿರುವುದು ಒಳ್ಳೆಯ ಸಂಗತಿ. ಕೊರೊನಾ ಮಹಾಮಾರಿ ಓಡಿಸಲು ಹಾಗೂ ದೇಶದ ಜನರನ್ನು ಸುರಕ್ಷಿತಗೊಳಿಸಲು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಲಾಕ್ ಡೌನ್ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಈ ನಿಟ್ಟಿನಲ್ಲಿ ಕ್ಷೇತ್ರ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಟಾಸ್ಕ್ ಫೋರ್ಸ್ ಮೇಲೆ ಜನರಿಗೆ ಇನ್ನಷ್ಟು ನಂಬಿಕೆ ಬರುವಂತೆ ಕೆಲಸ ಮಾಡಲಾಗುವುದು. ಲಾಕ್‌ಡೌನ್‌ಗಾಗಲೀ ಕೊರೊನಾ ಮಾರಿಗಾಗಲೀ ಜನತೆ ಭಯಪಡುವುದು ಬೇಡ. ಜನರ ಜೊತೆ ಸರ್ಕಾರ ಇದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಜನರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಪೊಲೀಸರ ಕೆಲಸವಷ್ಟೇ ಅಲ್ಲ. ಜನರು ಸ್ವಯಂಪ್ರೇರಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಲಾಕ್‌ಡೌನ್‌ಗೆ ಸಹಕರಿಸಬೇಕು. ಮನೆಯಿಂದ ಹೊರಬರದ ರೀತಿಯಲ್ಲಿ ಜನರು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಬೇಕು. ಯಾರೂ ಎದೆಗುಂದದೇ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ಏಪ್ರಿಲ್ 14ರವರೆಗೆ ಲಾಕ್‌ಡೌನ್‌ಗೆ ಸಹಕರಿಸಬೇಕು ಎಂದು ಕೃಷಿ ಸಚಿವರು ಕರೆ ನೀಡಿದರು.