ಚುಟುಕು ಕ್ರಿಕೆಟ್ನಲ್ಲಿ ವಿಶಿಷ್ಠ ದಾಖಲೆ ಬರೆದ ಅಫ್ಘಾನಿಸ್ತಾನ

ನವದೆಹಲಿ, ಸೆ 16  ಕ್ರಿಕೆಟ್ ಶಿಶು ಎಂದೇ ಕರೆಯುವ ಅಘ್ಫಾನಿಸ್ತಾನ ತಂಡ ವಿಶ್ವ ಚುಟುಕು ಕ್ರಿಕೆಟ್ನಲ್ಲಿ ನೂತನ ಮೈಲುಗಲ್ಲು ಸೃಷ್ಟಿಸಿದೆ.  

ಭಾನುವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟಿ-20 ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ 25 ರನ್ ಗಳಿಂದ ಜಯ ಸಾಧಿಸಿದ ಅಫ್ಘಾನಿಸ್ತಾನ ತಂಡ, ಸತತ 12 ಚುಟುಕು ಪಂದ್ಯ ಗೆದ್ದು ನೂತನ ದಾಖಲೆ ಮಾಡಿತು. ಆ ಮೂಲಕ 2009-2010 ರ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ಸತತ 12 ಟಿ-20 ಪಂದ್ಯಗಳಲ್ಲಿ ಗೆದ್ದ ದಾಖಲೆಯನ್ನು ಇದೀಗ ಅಫ್ಘಾನಿಸ್ತಾನ ಸರಿಗಟ್ಟಿದೆ.  

ಢಾಕಾದಲ್ಲಿ ನಡೆದಿದ್ದ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ, ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 164 ರನ್ ದಾಖಲಿಸಿತ್ತು. 165 ರನ್ ಗುರಿ ಹಿಂಬಾಲಿಸಿದ ಬಾಂಗ್ಲಾದೇಶ 19.5 ಓವರ್ಗಳಿಗೆ 139 ರನ್ ಗಳಿಗೆ ಕುಸಿಯಿತು. ಅಂತಿಮವಾಗಿ ಆಫ್ಘನ್ 25 ರನ್ ಗಳಿಂದ ಜಯ ಸಾಧಿಸಿತು.   

ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 40 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದ ಮೊಹಮ್ಮದ್ ನಬಿ ಹಾಗೂ ಅಸ್ಘರ್ ಅಫ್ಘನ್ ಜೋಡಿ ಐದನೇ ವಿಕೆಟ್ಗೆ 79 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತು. ಅಫ್ಘನ್ 37 ಎಸೆತಗಳಲ್ಲಿ 40 ರನ್(3 ಬೌಂಡರಿ, 2 ಸಿಕ್ಸರ್) ಹಾಗೂ ನಬಿ 54 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಮೂರು ಬೌಂಡರಿಯೊಂದಿಗೆ ಅಜೇಯ 84 ರನ್ ಸಿಡಿಸಿದರು. ಗುರಿ ಹಿಂಬಾಲಿಸಿದ ಆತಿಥೇಯ ಬಾಂಗ್ಲಾದೇಶದ ಪರ ಮಹ್ಮುದುಲ್ಹಾ (44 ರನ್) ಹಾಗೂ ಸಬ್ಬೀರ್ ರಹಮಾನ್ (24 ರನ್) ಅವರನ್ನು ಬಿಟ್ಟರೆ ಇನ್ನುಳಿದವರು 20ರ ವೈಯಕ್ತಿಕ ಗಡಿ ದಾಟಲೇ ಇಲ್ಲ.  

ಅಫ್ಘಾನಿಸ್ತಾನ ಆಫ್ ಸ್ಪಿನ್ನರ್ ಮುಜೀಬ್ ಉರ್ ರಹಮಾನ್ ನಾಲ್ಕು ಓವರ್ಗಳಿಗೆ 15 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಫರೀದ್ ಅಹಮದ್ 33 ರನ್ ನೀಡಿ ಎರಡು ವಿಕೆಟ್ ಕಿತ್ತರು. ನಬಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.  ಪಂದ್ಯದ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಸತತ 12 ಚುಟುಕು ಪಂದ್ಯಗಳಲ್ಲಿ ಗೆದ್ದ ಸಾಧನೆಗೆ ಭಾಜನವಾಯಿತು. ಇನ್ನೂ ಒಂದೇ-ಒಂದು ಪಂದ್ಯದಲ್ಲಿ ಜಯ ಸಾಧಿಸಿದರೆ, ಆಸ್ಟ್ರೇಲಿಯಾ ದಾಖಲೆಯನ್ನು ಮುರಿಯಲಿದೆ. ಅಫ್ಘಾನಿಸ್ತಾನ ತಂಡ ಜಿಂಬಾಬ್ವೆ (ವಿರುದ್ಧ ಮೂರು ಬಾರಿ), ಬಾಂಗ್ಲಾದೇಶ (ವಿರುದ್ಧ ನಾಲ್ಕು ಬಾರಿ) ಹಾಗೂ ಐಲರ್ೆಂಡ್ (ವಿರುದ್ಧ ಐದು ಬಾರಿ) ತಂಡಗಳ ವಿರುದ್ಧ ಗೆಲುವು ಸಾಧಿಸಿದೆ.