ಬೆಂಗಳೂರು, ಮಾ.23, ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಹಾವಳಿಯನ್ನು ತಡೆಯಲು ಸರ್ಕಾರದ ಕ್ರಮಗಳು ತೃಪ್ತಿದಾಯಕವಾಗಿಲ್ಲ. ಆದ್ದರಿಂದ ಈ ಬಗ್ಗೆ ಚರ್ಚೆ ನಡೆಸಲು ವಿಧಾನಸಭೆಯ ದಿನದ ಕಲಾಪ ಬದಿಗೊತ್ತಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸ್ಪೀಕರ್ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ಪತ್ರ ಬರೆದು ಒತ್ತಾಯಿಸಿದ್ದಾರೆ.ವಿಶ್ವವನ್ನೇ ಪೀಡಿಸುತ್ತಿರುವ ಕೊರೋನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಮತ್ತು ಈ ರೋಗ ತೀವ್ರವಾಗಿ ವ್ಯಾಪಕವಾಗಿ ಹಬ್ಬುವ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಸಮರ್ಪಕ ಮತ್ತು ತೃಪ್ತಿದಾಯಕವಾಗಿರುವುದಿಲ್ಲ. ದಿನನಿತ್ಯವೂ ಸರ್ಕಾರ ನೀಡುತ್ತಿರುವ ಅಂಕಿ-ಸಂಖ್ಯೆಗಳು ಜನರನ್ನು ಗೊಂದಲಕ್ಕೀಡು ಮಾಡುತ್ತಿವೆ. ತೀರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಪಾರದರ್ಶಕವಾಗಿರಬೇಕು. ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವತ್ತ ಗಟ್ಟಿ ನಿಲುವನ್ನು ಕೈಗೊಳ್ಳಬೇಕಾಗಿದೆ. ಸಾರ್ವಜನಿಕ ಮಹತ್ವದ ಈ ವಿಷಯಗಳ ಬಗ್ಗೆ ಇಂದು ದಿನದ ಕಲಾಪ ಬದಿಗೊತ್ತಿ ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.