ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ.ದೇಣಿಗೆ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನ

ಬೆಂಗಳೂರು, ಏ.4, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದೆ. ಕೋವಿದ್-19 ಎಂಬ ಕೊರೊನಾ ವೈರಸ್ ಸಂಬಂಧಿ ರೋಗ ನಮ್ಮ ದೇಶ ಹಾಗೂ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತ್ವರಿತವಾಗಿ ಎಚ್ಚೆತ್ತುಗೊಂಡು ಈ ಭಯಂಕರ ಅಂಟುಜಾಢ್ಯವನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ತೆರನಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಇಡೀ ದೇಶದ ಚಟುವಟಿಕೆಗಳನ್ನು
ಲಾಕ್ ಔಟ್ ಮಾಡುವುದರ ಮೂಲಕ ಸ್ತಬ್ಧಗೊಳಿಸಿದೆ. ಪ್ರಸ್ತುತ ಈ ರೋಗವು ಹರಡದಂತೆ ತಡೆಗಟ್ಟುವ ಕಾರ್ಯದಲ್ಲಿ ಸರ್ಕಾರದೊಡನೆ ಪ್ರತಿಯೊಬ್ಬರೂ ಸಹಕರಿಸುವ ಅಗತ್ಯವಿದೆ. ಆ
ನಿಟ್ಟಿನಲ್ಲಿ ಈ ತುರ್ತು ಪರಿಸ್ಥಿತಿಯ ನಿವಾರಣೆಗಾಗಿ ಸರ್ಕಾರದೊಡನೆ ಸ್ಪಂದಿಸುವ ನಿಟ್ಟಿನಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂಪಾಯಿ ಐವತ್ತು ಲಕ್ಷ ರೂಪಾಯಿಗಳನ್ನು ನೀಡಲು ಸಂಕಲ್ಪಿಸಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ  ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 ಈ ಹಿಂದೆಯೂ ಶ್ರೀಮಠವು ಸಂಕಷ್ಟಕ್ಕೊಳಗಾದವರ ಹಾಗೂ ದುಃಖಿತರ ಸೇವೆ ಮಾಡುವಲ್ಲಿ,  ನೊಂದವರಿಗೆ ಸಾಂತ್ವನ ಹೇಳುವಲ್ಲಿ ಸ್ಪಂದಿಸಿದೆ. ಕಾರ್ಗಿಲ್ ಯುದ್ಧ ನಡೆದಾಗ,ತಮಿಳುನಾಡಿನಲ್ಲಿ ಸುನಾಮಿ ಸಂಭವಿಸಿದಾಗ, ಗುಲ್ಬರ್ಗ ಮತ್ತಿತರ ಜಿಲ್ಲೆಗಳಲ್ಲಿ ನೆರೆಹಾವಳಿ ಉಂಟಾದಾಗ, ಚಿಕ್ಕಮಗಳೂರಿನ ಅಭಯಾರಣ್ಯ ಬೆಂಕಿಗಾಹುತಿಯಾದಾಗ, 2018ರಲ್ಲಿ ಕೊಡಗಿನಲ್ಲಿ ನೆರೆ ಹಾವಳಿ ಸಂಭವಿಸಿದಾಗ.... ಶ್ರೀ ಮಠವು ತಕ್ಷಣವೇ ಸ್ಪಂದಿಸಿ,ಸಂಕಷ್ಟಕ್ಕೊಳಗಾದವರಿಗೆ ಅವಶ್ಯಕವಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಧವಸ,ಧಾನ್ಯ, ವಸ್ತ್ರಾದಿ ದಿನೋಪಯೋಗಿ ಅಗತ್ಯ ವಸ್ತುಗಳನ್ನೆಲ್ಲ ವಿತರಿಸುವುದರ ಜೊತೆಗೆ ಬಡ ಜನತೆ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ನಿರೀಕ್ಷೆಗೂ ಮೀರಿದ ಆರ್ಥಿಕ ನೆರವನ್ನೂ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ಇಂದಿನ ಕೋವಿದ್-19 ಕೊರೊನಾ ವೈರಸ್ನಿಂದಾಗಿ ಉಂಟಾಗಿರುವ ತುರ್ತು ಪರಿಸ್ಥಿತಿಯ ನಿವಾರಣೆಗಾಗಿ ಸರ್ಕಾರದೊಡನೆ ಸ್ಪಂದಿಸುವ ನಿಟ್ಟಿನಲ್ಲಿ ಶ್ರೀ ಮಠವು
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂಪಾಯಿ 50 ಲಕ್ಷ ರೂ.ಗಳನ್ನು ನೀಡಿದೆ.ಇದೇ ಸಂದರ್ಭದಲ್ಲಿ ಸಮಾಜವನ್ನು ಕೊರೊನಾ ಎಂಬ ಮಹಾಮಾರಿಯ ಮೃತ್ಯುಮುಖದಿಂದ ಪಾರಾಗಿಸಲು ಶ್ರಮಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತು ತಮ್ಮ ಪ್ರಾಣದ ಹಂಗನ್ನು ತೊರೆದು ಮಹಾಮಾರಿಯ ಎದುರಿಗೆ ಹಗಲಿರುಳೆನ್ನದೆ ಹೋರಾಡುತ್ತಿರುವ ವೈದ್ಯರು, ಶುಶ್ರೂಷಕಿಯರು ಮತ್ತು ಸಿಬ್ಬಂದಿ ವರ್ಗ ಹಾಗೂ ರಾಜ್ಯದ ಆರಕ್ಷಕ ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಸ್ಮರಿಸೋಣ. ಜಗತ್ತಿನಾದ್ಯಂತ ಹಬ್ಬಿರುವ ಈ ಕೊರೊನಾ ಅಂಟುಜಾಢ್ಯದಿಂದ ಮುಕ್ತಿಯನ್ನು ಪಡೆದು ಸ್ವಸ್ಥ  ಸಮಾಜದ ನಿರ್ಮಾಣಕ್ಕೆ ಕಾಲಭೈರವೇಶ್ವರಸ್ವಾಮಿ ಮತ್ತು ಪರಮಪೂಜ್ಯ ಗುರುಗಳ ಆಶೀರ್ವಾದವನ್ನು ಕೋರುತ್ತೇವೆ ಎಂದು ಸ್ವಾಮೀಜಿಯಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.