ಬೆಳಗಾವಿ 11: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ ಸಮಿತಿ ಸಹಯೋಗದೊಂದಿಗೆ ಶ್ರೀಮದ್ ವೀರಶೈವ ವೀರಶೈವ ಮಹಾಮತ ಸ್ಥಾಪನಾಚಾರ್ಯರಾದ ಶೀ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಮಾ. 16ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಮಹಾಂತೇಶ ಕವಟಗಿಮಠ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳ್ಳಗ್ಗೆ 9ಗಂಟೆಗೆ ನಗರದ ಚನ್ನಮ್ಮ ವೃತ್ತದಿಂದ ಶ್ರೀ ರೇಣುಕಾಚಾರ್ಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಕುಮಾರಗಂಧರ್ವ ರಂದ ಮಂದಿರದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಗಮಿಸುವರು. ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಹುಣಸಿಹಾಳ ಹಿರೇಮಠದ ಬಸವರಾಜ ದೇವರು, ಅರಳಿಕಟ್ಟಿ ವಿರಕ್ತಮಠದ ಶಿವಮೂತರ್ಿ ಸ್ವಾಮಿಜಿ ಸಾನ್ನಿಧ್ಯ ವಹಿಸುವರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಎಸ್.ಎಂ. ಗಂಗಾಧರಯ್ಯ ಅವರು ಶ್ರೀ ರೇಣುಕಾಚಾರ್ಯರ ಕುರಿತು ಉಪನ್ಯಾಸ ನೀಡುವರು. ಜಿಲ್ಲೆಯ ಜನಪ್ರತಿನಿಧಿಗಳು, ಚಿತ್ರನಟಿ ಪ್ರಿಯಾ ಸವದಿ ಮತ್ತಿತರ ಗಣ್ಯರು ಪಾಲ್ಗೊಳ್ಳುವರು.
ಜಾತಿ ಜಾತಿಗಳ ನಡುವಿನ ವೈಷಮ್ಯ ಮೀರಿ ಬೆಳೆದ ರೇಣುಕಾಚಾರ್ಯರು, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಕೊಟ್ಟವರು. ಎಲ್ಲ ಸಮುದಾಯದವರು ಒಗ್ಗೂಡಿ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದೇವೆ. ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರನ್ನೂ ಆಹ್ವಾನಿಸುತ್ತಿದ್ದೇವೆ ಎಂದು ತಿಳಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಈ ಹಿಂದೆ ಮಠಗಳಲ್ಲಿ ಮಾತ್ರ ರೇಣುಕಾಚಾರ್ಯ ಜಯಂತ್ಯುತ್ಸವ ಆಚರಿಸಲಾಗುತ್ತಿತ್ತು, ಮೂರು ವರ್ಷಗಳಿಂದ ಸಕರ್ಾರದಿಂದಲೇ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. ರೇಣುಕಾಚಾರ್ಯರು ಒಂದೇ ಜಾತಿ, ಮತ ಹಾಗೂ ಪಂಗಡಕ್ಕೆ ಸೀಮಿತವಾದವರಲ್ಲ, ಹಾಗಾಗಿ ಎಲ್ಲ ಸಮುದಾಯದವರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ವಿರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರ ಸವದಿ, ಶ್ರೀಶೈಲ ಮಠದ ಸುರೇಶ ಯಾದವ, ಸೋಮಶೇಖರ ಹಿರೇಮಠ, ಚಂದ್ರಪ್ಪ ಸಂಗೊಳ್ಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು