ಹಾಸ್ಟೆಲ್‌ಗಳಿಗೆ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಭೇಟಿ : ಸಮಸ್ಯೆಗಳ ಅಳಲನ್ನು ತೋಡಿಕೊಂಡ ವಿದ್ಯಾರ್ಥಿನಿಯರು
ಕಂಪ್ಲಿ 30: ತಾಲೂಕಿನ ಬ್ರೈಟ್‌ವೇ ಶಾಲೆಗೆ ತೆರಳುವ ಬಳಿಯಲ್ಲಿರುವ ಡಾ.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯಕ್ಕೆ ಕೊಪ್ಪಳ ಅಪರ ಜಿಲ್ಲಾಧಿಕಾರಿ ಹಾಗೂ ತಾಲೂಕು ನೋಡಲ್ ಅಧಿಕಾರಿ ಸಿದ್ದರಾಮೇಶ್ವರ ಭೇಟಿ ನೀಡಿದ ಸಂದರ್ಭದಲ್ಲಿ ಬೆಡ್ ಸೀಟ್, ಹಾಸಿಗೆ ವದಿಕೆ, ಬಿಸಿ ನೀರು ಸೇರಿದಂತೆ ನಾನಾ ಸಮಸ್ಯೆಗಳ ಅಳಲನ್ನು ವಿದ್ಯಾರ್ಥಿನಿಯರು ತೋಡಿಕೊಂಡರು. ವಸತಿ ಶಾಲೆಯಲ್ಲಿ ಬಿಸಿ ನೀರು ಇಲ್ಲ. ಕೆಲ ಬೆಡ್‌ಗಳು ಹಾಳಾಗಿದ್ದು, ಇನ್ನೂ ಬೆಡ್‌ಗಳ ಕೊರತೆ ಇದೆ. ಹಳೇ ಪುಸ್ತಕಗಳಿದ್ದು, ಹೊಸ ಪುಸ್ತಕಗಳ ಅವಶ್ಯಕತೆ ಇದೆ.
ಹೀಗೆ ನಾನಾ ಸಮಸ್ಯೆಗಳ ನಡುವೆ ವಿದ್ಯಾಭ್ಯಾಸ ಮಾಡುವಂತಾಗಿದ್ದು, ಆದಷ್ಟು ಬೇಗ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದರು. ತಾಲೂಕಿನ ಏಳು ವಸತಿ ನಿಲಯಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಆಲಿಸಿದ ನಂತರ ಪತ್ರಕರ್ತರೊಂದಿಗೆ ಸಿದ್ದರಾಮೇಶ್ವರ ಮಾತನಾಡಿ, ಸರ್ಕಾರದ ಆದೇಶದಂತೆ ಹಿರಿಯ ಕೆಎಎಸ್ ಅಧಿಕಾರಿಗಳನ್ನ ತಾಲೂಕಿಗೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದು, ಅದರಂತೆ ಕಂಪ್ಲಿ ತಾಲೂಕಿನ ವಸತಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ, ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ನಿಲಯ ಪಾಲಕರಿಗೆ ಖಡಕ್ ಆಗಿ ಸೂಚಿಸಲಾಗಿದೆ. ನಿಲಯಕ್ಕೆ ತೆರಳಿದಾಗ ಬಹುತೇಕವಾಗಿ ಚಳಿ ಇರುವುದರಿಂದ ಎಲ್ಲಾ ಕಡೆ ಸೋಲಾರ್ ಸಮಸ್ಯೆ ಇರುವುದು ತಿಳಿದು ಬಂದಿದೆ.
ಇದರಿಂದ ಬಿಸಿ ನೀರು ಇಲ್ಲದಂತಾಗಿರುವ ಸಮಸ್ಯೆ ಆಲಿಸಲಾಗಿದೆ. ಕೂಡಲೇ ಸೋಲಾರ್ ದುರಸ್ಥಿ ಮಾಡಿ, ಬಿಸಿ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿರುವೆ. ಬಹಳಷ್ಟು ವಸತಿ ನಿಲಯದಲ್ಲಿ ಬೆಡ್ ಸೀಟ್, ವದಿಕೆ ಸಮಸ್ಯೆಗಳಿವೆ. ಕೆಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎನ್ನುತ್ತಾರೆ. ಅದನ್ನು ಪರೀಶೀಲಿಸಲಾಗುವುದು. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಣದಲ್ಲಿ ಅಡಗಿದ್ದು, ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಲು ಸದಾ ಪ್ರಯತ್ನಿಸಲಾಗುವುದು. ಹಾಸ್ಟೆಲ್‌ಗಳಲ್ಲಿ ಸ್ವಚ್ಚತೆ ಕಾಪಾಡಿ, ಗುಣಮಟ್ಟದ ಆಹಾರ ನೀಡಬೇಕು. ಪ್ರತಿ ತಿಂಗಳು ಭೇಟಿ ನೀಡುತ್ತೇವೆ. ಅದರಂತೆ ಮುಂದಿನ ತಿಂಗಳು ಭೇಟಿ ನೀಡಿದಾಗ ಹಿಂದಿನ ಸಮಸ್ಯೆಗಳು ಎಷ್ಟರ ಮಟ್ಟಿಗೆ ಪರಿಹರಿಸಲಾಗಿದೆ ಎಂಬುದನ್ನು ಗಮನಿಸಲಾಗುವುದು. ರಾಮಸಾಗರದ ವಸತಿ ನಿಲಯವು ತುಂಬ ಹಳೇಯದ್ದಾಗಿದ್ದು, ಹೊಸ ಕಟ್ಟಡದ ಅವಶ್ಯಕತೆ ಇದ್ದರೆ ಕ್ರಮವಹಿಸಲಾಗುವುದು ಎಂದರು. ಪಟ್ಟಣದ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಪರೀಶೀಲಿಸಿದ ನಂತರ ಊಟ ಸವಿದರು.