ಆರ್‌.ಟಿ.ಓ. ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ: ಸಚಿವ ರಾಮಲಿಂಗ ರೆಡ್ಡಿ

ಆರ್‌.ಟಿ.ಓ. ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ: ಸಚಿವ ರಾಮಲಿಂಗ ರೆಡ್ಡಿ Action will be taken against officials if middlemen are found in RTO office: Minister Ramalinga Redd

ಲೋಕದರ್ಶನ ವರದಿ

ಕಾರವಾರ 20:   ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಸಂಬಂಧಪಟ್ಟ ಆರ್‌.ಟಿ.ಓ ಮತ್ತು ಎ.ಆರ್‌.ಟಿ.ಓ ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು. ಅವರು ಶುಕ್ರವಾರ ದಾಂಡೇಲಿ ಯಲ್ಲಿ ರೂ. 6.55 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟಿಸಿ ಮಾತನಾಡಿದರು. 

 ರಾಜ್ಯದ ಪ್ರಾದೇಶಿಕ ಕಚೇರಿಗಳಲ್ಲಿನ ಬಹುತೇಕ ಸಾರ್ವಜನಿಕ ಸೇವೆಗಳನ್ನು ಆನ್‌ಲ್ಯೆನ್ ವ್ಯವಸ್ಥೆಗೊಳಿಸಲಾಗಿದ್ದು, ಸಾರಿಗೆ ಇಲಾಖೆಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. 

ರಾಜ್ಯದಲ್ಲಿ ಇದುವರೆಗೂ 20 ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳು ಕಾರ್ಯಾರಂಭವಾಗಿದ್ದು, ಇನ್ನೂ 25 ಕಡೆಯಲ್ಲಿ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಇದರಿಂದ ರಾಜ್ಯದ 31 ಜಿಲ್ಲೆಗಳಲ್ಲಿ 45 ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ವಾಗಲಿದ್ದು, ಈ ಮೂಲಕ ದೇಶದಲ್ಲೇ ಅತೀ ಹೆಚ್ಚು ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಇರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದೇವೆ ಎಂದು ತಿಳಿಸಿದರು. 

ಸಾರಿಗೆ ಇಲಾಖೆಯಲ್ಲಿ ಸಮಗ್ರ ಸುಧಾರಣೆ ತರಲಾಗುತ್ತಿದ್ದು, ರಾಜ್ಯದ ಮತ್ತು ಬೇರೆ ರಾಜ್ಯಗಳ ವಾಹನಗಳು ಕಡ್ಡಾಯವಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಬಂದರೇ ಮಾತ್ರವೇ ವಾಹನಗಳ ಫಿಟ್‌ನೇಸ್ ಆಗಲು ಜಿಯೋ ಫೆನಸಿಂಗ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಅರ್ಧದಷ್ಟು ವಾಣಿಜ್ಯ ವಾಹನಗಳ ಲೋಕೇಶನ್ ಟ್ಯ್ರಾಕಿಂಗ್ ಮಾಡಲಾಗಿದ್ದು, ಉಳಿದ ವಾಹನಗಳನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. 

ರಾಜ್ಯದ 31 ಜಿಲ್ಲೆಗಳಲ್ಲಿ ಆಟೋ ಟೆಸ್ಟಿಂಗ್ ಸ್ಟೇಷನ್ ಮಾಡಲು ಟೆಂಡರ್ ಕರೆಯಲಾಗಿದ್ದು, ಈಗಾಗಲೇ 3 ಟೆಂಡರ್‌ಗಳಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಉಳಿದ 2 ಟೆಂಡರ್‌ಗಳಿಗೆ ಮರು ಟೆಂಡರ್ ಕರೆಯಲಾಗಿದೆ ಇದರಿಂದಾಗಿ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ಆಟೋ ಟೆಸ್ಟಿಂಗ್ ಸ್ಟೇಷನ್‌ನಲ್ಲಿ ಸುಲಭವಾಗಿ ನಡೆಯಲಿವೆ ಎಂದರು. 

 ರಾಜ್ಯದಲ್ಲಿ ನಡೆದ ಸ್ಲೀಪರ್ ಬಸ್ ದುರಂತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿಯನ್ನು ಜಾರಿಗೊಳಿಸಿದ್ದು, ಅದರಂತೆ ಖಾಸಗಿ ಬಸ್‌ಗಳ ಮಾಲೀಕರಿಗೆ ಈ ತಿಂಗಳದ ಅಂತ್ಯದೊಳಗೆ ಸರ್ಕಾರ ಸೂಚಿಸಿರುವ ನಿಯಮಗಳಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸ್ಲೀಪರ್ ಬಸ್ ಗಳನ್ನು ಓಡಿಸಲು ಅನುಮತಿ ನೀಡಲಾಗುವುದು ಎಂದರು. 

 ದಾಂಡೇಲಿಯಲ್ಲಿ ಶೀಘ್ರದಲ್ಲೇ ನೂತನ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭಿಸಲಾಗುವುದು ಹಾಗೂ ದಾಂಡೇಲಿ-ಬೆಂಗಳೂರು ಪಲ್ಲಕ್ಕಿ ಬಸ್ ನೀಡಲು ಸಂಸ್ಥೆಯ ಎಂ.ಡಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು. 

 ದಾಂಡೇಲಿಯಲ್ಲಿ ದೇಶಪಾಂಡೆ ಅವರ ಪ್ರಯತ್ನದಿಂದಾಗಿ ಉತ್ತಮವಾದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಜೊತೆಗೆ ಸ್ವಯಂ ಚಾಲಿತ ಚಾಲನ ಪರೀಕ್ಷಾ ಪಥವನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಿದ್ದು, ಉತ್ತಮ ಗುಣಮಟ್ಟದ ಪಥ ನಿರ್ಮಾಣವಾಗಿದ್ದು, ಈ ಪಥವು ಸ್ವಯಂ ಚಾಲಿತವಾಗಿರುವುದರಿಂದ ಎಲ್ಲವೂ ಸೆನ್ಸರ್ ಮೂಲಕ ನಡೆಯಲಿದ್ದು, ಯಾವುದೇ ರೀತಿಯ ಮಾನವ ಹಸ್ತಕ್ಷೇಪ ಇರುವುದಿಲ್ಲ ಎಂದರು. 

ಶಾಸಕ ಆರ್‌.ವಿ ದೇಶಪಾಂಡೆ ಮಾತನಾಡಿ, ದೇಶ ವಿದೇಶದಿಂದ ಪ್ರವಾಸಿಗರು ದಾಂಡೇಲಿಗೆ ಆಗಮಿಸುತ್ತಿದ್ದಾರೆ ಆ ನಿಟ್ಟಿನಲ್ಲಿ ದಾಂಡೇಲಿ ನಗರವನ್ನು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಾಗುವುದು ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ದಾಂಡೇಲಿಯಲ್ಲಿ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಕನಸಾಗಿದೆ ಹಾಗೂ ದಾಂಡೇಲಿಯಿಂದ ಬೆಂಗಳೂರಿಗೆ ಸುಸಜ್ಜಿತ ಬಸ್ ಸಂಚಾರ ಆರಂಭವಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ಹಾಲಸ್ವಾಮಿ, ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ, ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತ ವಿವೇಕ್ ಬನ್ನೇ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಟಿ. ಸಿ. ಹಾದಿಮನಿ, ಡಿವೈಎಸ್‌ಪಿ ಶಿವಾನಂದ ಮದರಕಂಡಿ, ದಾಂಡೇಲಿಯ ಎ.ಆರ್‌.ಟಿ.ಓ. ಅವಿನಾಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.