ಕ್ವಾರಂಟೈನ್‌ನಲ್ಲಿದ್ದವರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕ್ರಮ: ಸಚಿವ ನಾರಾಯಣ ಗೌಡ ಎಚ್ಚರಿಕೆ

ಮಂಡ್ಯ, ಮೇ 15,ಕ್ವಾರಂಟೈನ್  ನಲ್ಲಿ ಇರುವವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಗುಣಮಟ್ಟದ ಊಟ - ತಿಂಡಿ ಕೊಡಬೇಕು. ಈ  ವಿಚಾರದಲ್ಲಿ ದೂರು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಸೌಲಭ್ಯ ಕಲ್ಪಿಸುವಲ್ಲಿ ವಿಳಂಬ ಮಾಡಿದರೂ   ಕ್ರಮ ಅನಿವಾರ್ಯ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ  ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಸಿದ್ದಾರೆ.ಕೆ  ಅರ್ ಪೇಟೆ ತಾಲೂಕಿನ ಕಿತ್ತೂರು ರಾಣಿ ವಸತಿ ಶಾಲೆಗೆ ಭೇಟಿನೀಡಿದ ಸಚಿವರು,   ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೊರಗಡೆಯಿಂದ ಬಂದವರಿಗೆ ಕ್ವಾರಂಟೈನ್  ಮಾಡಲಾಗಿದೆ.

ಅವರನ್ನು ಸರಿಯಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದರೆ ಊಟ, ತಿಂಡಿ,  ಹಾಲು, ಇತ್ಯಾದಿ ವ್ಯವಸ್ಥೆಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪ ಇದೆ. ಹೀಗೆ  ನಡೆದುಕೊಂಡರೆ ಕ್ರಮತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಇದಕ್ಕೂ  ಮುನ್ನ ತಾಲೂಕಿನ ಜಾಗಿನಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ  ಜಾಗಿನಕೆರೆ ಸೀಲ್‌ ಡೌನ್‌ ಮಾಡಲಾಗಿದೆ. ಹೀಗಾಗಿ ಈ ಊರಿಗೆ ಭೇಟಿ ನೀಡಿ ಜನರಿಗೆ ಆತಸ್ಥೈರ್ಯ  ತುಂಬಿದ ಸಚಿವರು, ಯಾರು ಆತಂಕಗೊಳ್ಳುವ ಅಗತ್ಯವಿಲ್ಲ. ಒಂದಷ್ಟು ದಿನ ಎಲ್ಲರೂ ಸಹಕರಿಸಬೇಕು.  ನಿಮಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು ಭರವಸೆ ನೀಡಿದರು. ಇದೆ  ವೇಳೆ ಸಾರ್ವಜನಿಕರಿಗೆ ಸಚಿವರು ಆಹಾರದ ಕಿಟ್ ವಿತರಿಸಿದರು. ಬಳಿಕ ಮರುವನ ಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.