ಬೆಂಗಳೂರು, ಏ.3, ಕರ್ನಾಟಕ ಲಾಕ್ ಡೌನ್ ಆದ ದಿನದಿಂದ ಸಾಕಷ್ಟು ಬಿಡಾಡಿ ದನಗಳು, ಬೀದಿ ನಾಯಿಗಳು ಹಾಗೂ ಪೆಟ್ ಶಾಪ್ ನಲ್ಲಿರುವ ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು ಮುಂದಾಗಿವೆ. ಇದೇ ಸಮಯದಲ್ಲಿ ಕೆಲವು ಪೆಟ್ ಶಾಪ್ ಗಳ ಮಾಲೀಕರು ಅವುಗಳನ್ನು ನಿರ್ಲಕ್ಷಿಸಿರುವುದು ತಿಳಿದಿರುತ್ತದೆ. ಇಲಾಖೆಯ ಆಯುಕ್ತರೊಂದಿಗೆ ಇದರ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೆ ಅವುಗಳ ಸಂರಕ್ಷಣೆ ಸಹ ನಮ್ಮ ಹೊಣೆಯಾಗಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಸಚಿವರ ನಿರ್ದೇಶನದಂತೆ ಇಂದು ಬೆಂಗಳೂರಿನ ಪಶುಪಾಲನಾ ಭವನದಲ್ಲಿ ಆಯುಕ್ತರು ಸ್ಥಳಿಯವಾಗಿ ಲಭ್ಯವಿರುವ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರೊಡನೆ ಚರ್ಚೆ ನಡೆಸಿದರು.
ಪ್ರಾಣಿ, ಪಕ್ಷಿ ಮತ್ತು ಜಾನುವಾರಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಸಂಸ್ಥೆಗಳು ನಿರ್ವಹಿಸಬಹುದಾದ ಪಾತ್ರಗಳ ಬಗ್ಗೆ ಆಯುಕ್ತರು ಚರ್ಚೆ ನಡೆಸಿದರು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಎಲ್ಲ ರೀತಿಯ ಸಹಕಾರವನ್ನು ಇಲಾಖೆ ವತಿಯಿಂದ ನೀಡುವುದಾಗಿ ಆಯುಕ್ತರು ಹೇಳಿದ್ದಾರೆ. ಜಿಲ್ಲಾ ಪ್ರಾಣಿ ದಯಾ ಸಂಘಗಳು ಹಾಗೂ ಆಯಾ ಜಿಲ್ಲೆಗಳಲ್ಲಿರುವ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸೇರಿ ಪ್ರಾಣಿ ಪಕ್ಷಿ ಜಾನುವಾರಗಳಿಗೆ ಸೂಕ್ತ ರಕ್ಷಣೆ ಆಹಾರ, ನೀರು ಮತ್ತು ಆರೋಗ್ಯ ರಕ್ಷಣೆಯನ್ನು ಕೈಗೊಳ್ಳಲು ಸಹ ಸುತ್ತೋಲೆ ಹೊರಡಿಸಲಾಗಿದೆ. Prevention Cruelty to Animals Act, 1960ರ ಕಲಂ 11 (1) ಹಾಗೂ IPC 428 ಮತ್ತು 429 ರ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶಾನುಸಾರ ಯಾವುದೇ ಪ್ರಾಣಿ, ಪಕ್ಷಿ, ಜಾನುವಾರಗಳನ್ನು ಆಹಾರ ನೀರು, ಆಶ್ರಯ, ಆರೋಗ್ಯ ನೀಡದೆ ಕಡೆಗಣಿಸಿ ಅವುಗಳ ಸಾವಿಗೆ ಕಾರಣರಾಗುವ ಮಾಲೀಕರು ನಿಯಮಾನುಸಾರ ಶಿಕ್ಷೆಗೆ ಅರ್ಹರಾಗುತ್ತಾರೆ. ಯಾವುದೇ ಜಿಲ್ಲೆಗಳಲ್ಲಿ ಈ ತರಹದ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪ್ರಾಣಿ ದಯಾ ಸಂಘದವರಿಗೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಬೇಕು ಹಾಗೂ ಅವುಗಳ ಮೂಕ ರೋದನವನ್ನು ತಪ್ಪಿಸಲು ಇಲಾಖೆಗೆ ಸಹಕರಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಸದಸ್ಯ ಕಾರ್ಯದರ್ಶಿಗಳಾದ ಎಂ.ಟಿ ಮಂಜುನಾಥ, ಪಶುಸಂಗೋಪನೆ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಜಯಪ್ರಕಾಶ್ ಹಾಗೂ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದ್ಯಸರಾದ ಶಿವಾನಂದ ಡಂಬಳ್, ಜೀವನ್ ಕುಮಾರಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.