ನವದೆಹಲಿ, ಅ, 15: ತಿಹಾರ್ ಜೈಲುವಾಸ, ಪೊಲೀಸರ ಬರ್ಬರತೆ ಕುರಿತು ತಮಗಾದ ಕಹಿ ಅನುಭವನ್ನು ಈ ಬಾರಿ ಆರ್ಥಿಕ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ಅಭಿಜಿತ್ ಬ್ಯಾನರ್ಜಿ, ಲೇಖನದಲ್ಲಿ ವಿವರಿಸಿದ್ದಾರೆ.
ಅಭಿಜಿತ್ ಬ್ಯಾನರ್ಜಿ, ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಕುಲಪತಿಗಳ ವಿರುದ್ಧವೇ ಘೇರಾವ್ ಹಾಕಿ ದೆಹಲಿಯ ತಿಹಾರ್ ಜೈಲು ಸೇರಿದ್ದರು !
ಎಸ್ತರ್ ಡ್ಯುಫ್ಲೋ ಮತ್ತು ಮೈಕೆಲ್ ಕ್ರೆಮೆರ್ ಜತೆ ಸೇರಿ ಜಾಗತಿಕ ಬಡತನ ನಿರ್ಮೊಲನೆಗಾಗಿ ನಡೆಸಿದ ಹೋರಾಟಕ್ಕಾಗಿ ಪ್ರಶಸ್ತಿಗೆ ಭಾಜನರಾಗಿರುವ ಅಭಿಜಿತ್ ಬ್ಯಾನರ್ಜಿ, ಮೂರು ವರ್ಷಗಳ ಹಿಂದೆ ದೆಹಲಿಯ ಪ್ರಮುಖ ದಿನಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಹೇಗೆ ಪೊಲೀಸರು ತಮ್ಮನ್ನು ಯಾವ ರೀತಿ ನಡೆಸಿಕೊಂಡಿದ್ದರು, ಹೊಡೆದಿದ್ದರು ಎಂಬ ಸ್ವಂತ ಅನುಭವ ವಿವರಿಸಿದ್ದಾರೆ .
ಕನ್ಹಯ್ಯ ಕುಮಾರ್ ಅವರನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷಸ್ಥಾನದಿಂದ ತೆಗೆದು ಹಾಕಿದ್ದನ್ನು ಪ್ರತಿಭಟಿಸಿ ಕುಲಪತಿಗಳ ಮನೆಗೆ ಮುತ್ತಿಗೆ ಹಾಕಿದ್ದ ಸಮಯಲ್ಲಿ ನಡೆದ ಘಟನೆಯನ್ನು ಅವರು ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ.
ಆ ಸಮಯದಲ್ಲಿ ನೂರಾರು ಮಂದಿಯ ಜತೆಗೆ ಅಭಿಜಿತ್ ಬ್ಯಾನರ್ಜಿ ಅವರನ್ನು ಕೂಡಾ ಬಂಧಿಸಲಾಗಿತ್ತು. ಬಳಿಕ ತಿಹಾರ್ ಜೈಲಿನಲ್ಲಿ ಅವರನ್ನು 10 ದಿನಗಳ ಕಾಲ ಅವರನ್ನು ಕೂಡಿ ಹಾಕಲಾಗಿತ್ತು ಆಗ ಪೊಲೀಸರು ಚೆನ್ನಾಗಿ ಥಳಿಸಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
ತಿಹಾರ್ ಜೈಲಿಗೆ ಹಾಕಿದ್ದರೂ ದೇಶದ್ರೋಹ ಪ್ರಕರಣ ದಾಖಲಿಸಿರಲಿಲ್ಲ. ಬದಲಾಗಿ ಕೊಲೆಯತ್ನ ಮತ್ತು ದೊಂಬಿ ಆರೋಪ ಹೊರಿಸಿದ್ದರು ಆದರೆ ಪೊಲೀಸರು ದಾಖಲಿಸಿದ್ದ ಯಾವ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ. ಆದರೆ ಸುಖಾಸುಮ್ಮನೆ 10 ದಿನ ತಿಹಾರ್ ಜೈಲು ವಾಸ ಅನುಭವಿಸಬೇಕಾದ ಪರಿಸ್ಥಿತಿ ಬಂದಿದ್ದನ್ನು ಅವರು ತಮ್ಮ ಲೇಖನದಲ್ಲಿ ಸ್ಮರಿಸಿಕೊಂಡಿದ್ದಾರೆ.