ಗ್ರಂಥಪಾಲಕರ ವೇತನ ಬಿಡುಗಡೆಗೆ ಆಯನೂರು ಮಂಜುನಾಥ್ ಮನವಿ

ಬೆಂಗಳೂರು/ಶಿವಮೊಗ್ಗ,  ಮೇ 18,ಗ್ರಾಮೀಣ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಗ್ರಂಥಪಾಲಕರಿಗೆ ಆದಷ್ಟು ಬೇಗ ವೇತನ ಬಿಡುಗಡೆ ಮಾಡುವಂತೆ ಮಾಜಿ ಸಂಸದ ಹಾಗೂ ಮೇಲ್ಮನೆ  ಸದಸ್ಯ ಆಯನೂರು ಮಂಜುನಾಥ್ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ  ಮಾಡಿದ್ದಾರೆ.ರಾಜ್ಯದ ಪಂಚಾಯತ್ ರಾಜ್ ಇಲಾಖೆಯಲ್ಲಿ ಸುಮಾರು 6000 ಗ್ರಾಮ  ಪಂಚಾಯತ್‌ಗಳಿದ್ದು,‌ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಗ್ರಂಥಪಾಲಕರಿಗೆ  ಕಳೆದ ಮಾರ್ಚ್ ತಿಂಗಳಿನಿಂದ ವೇತನ ಪಾವತಿಯಾಗದೇ ಅವರೆಲ್ಲ   ತೊಂದರೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ಕೂಡಲೇ ವೇತನ ಪಾವತಿಸುವಂತೆ ಸಂಬಂಧಪಟ್ಟವರಿಗೆ  ಆದೇಶಿಸಬೇಕೆಂದು ಸಚಿವರಿಗೆ ಆಯನೂರು ಮಂಜುನಾಥ್ ಪತ್ರದ ಮುಖೇನ ಮನವಿ ಮಾಡಿದ್ದಾರೆ.
ವಿಧಾನಮಂಡಲ  ಅಧಿವೇಶನದ ಸದನದಲ್ಲಿ ಈ ಗ್ರಂಥಪಾಲಕರ ವೇತನ ಹಾಗೂ ಕೆಲಸದ ವೇಳೆ ಬಗ್ಗೆ  ಚರ್ಚೆಯಾಗಿದ್ದು, ಕೆಲಸದ ವೇಳೆಯನ್ನು 4 ಗಂಟೆಯಿಂದ 8 ಗಂಟೆಗೆ ಏರಿಸಬೇಕು. ಅವರಿಗೆ  ದೊರೆಯಬೇಕಾಗಿದ್ದ ಕನಿಷ್ಠ ವೇತನ  13,200 ರೂ.ಗಳನ್ನು ನೀಡದೆ ವಂಚಿಸುತ್ತಿರುವುದನ್ನು  ಗಮನಿಸಿ ಕೂಡಲೇ ಸರಿಪಡಿಸುವಂತೆ ಆದೇಶಿಸಲಾಗಿದೆ. ಆದರೂ  ಯಥಾಸ್ಥಿತಿ  ಮುಂದುವರೆದಿದ್ದು, ಅಧಿಕಾರಿ ವರ್ಗ ಹಳೆಯ ಪದ್ಧತಿಯನ್ನೇ ಮುಂದುವರೆಸಿ ಗ್ರಂಥಪಾಲಕರಿಗೆ  ಕನಿಷ್ಠ ವೇತನವನ್ನು ಸಹ ನೀಡದೆ ಹಾಗೂ ಕೆಲಸದ ಸಮಯವನ್ನು 4 ಗಂಟೆಯಿಂದ 8 ಗಂಟೆಗೆ  ವಿಸ್ತರಿಸದೇ ಇರುವುದರಿಂದ  ಅನ್ಯಾಯವಾಗುತ್ತಿದೆ. ಆದ್ದರಿಂದ ಅವರ ನೋವಿನ ಪರ ನಿಂತಿರುವ  ಈಶ್ವರಪ್ಪ ಅವರು ಕೂಡಲೇ ಇದನ್ನು ಸರಿಪಡಿಸಿ ಗ್ರಂಥಪಾಲಕರಿಗೆ ಕನಿಷ್ಠ ವೇತನ ದೊರೆಯುವಂತೆ  ಮಾಡಬೇಕು. ಮಾರ್ಚ್‌ನಿಂದ ವೇತನ ಪಾವತಿಯಾಗದೆ ತೊಂದರೆಯಲ್ಲಿರುವ ಗ್ರಂಥಪಾಲಕರಿಗೆ  ಕೂಡಲೇ ವೇತನ ಪಾವತಿಯಾಗುವಂತೆ ಆದೇಶಿಸುವಂತೆ‌ ಆಯನೂರು ಮಂಜುನಾಥ್ ಮನವಿ ಮಾಡಿದ್ದಾರೆ.