ಢಾಕಾ, ಮಾ12 :ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಬರುವ ಜೂನ್ ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಜೂನ್ 11ರಂದು ಚಟ್ಟೊಗ್ರಾಂನಲ್ಲಿ ಆರಂಭವಾದರೆ, ದ್ವಿತೀಯ ಟೆಸ್ಟ್ ಪಂದ್ಯ ಢಾಕಾದಲ್ಲಿ ಜೂನ್ 19ರಂದು ಶುರುವಾಗಲಿದೆ. ಈ ಸರಣಿಯು ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಭಾಗವಾಗಿದ್ದು, ಎರಡು ಪಂದ್ಯಗಳಿಂದ ಉಭಯ ತಂಡಗಳು 120 ಅಂಕ ಗಳಿಸುವ ಅವಕಾಶ ಹೊಂದಿವೆ.ಆದರೆ ಆಸ್ಟ್ರೇಲಿಯಾ ಪ್ರವಾಸದ ಖಚಿತ ದಿನಾಂಕ ಹಾಗೂ ಟೆಸ್ಟ್ ಸರಣಿಗೂ ಮುನ್ನ ನಡೆಯಲಿರುವ ನಾಲ್ಕು ದಿನದ ಅಭ್ಯಾಸ ಪಂದ್ಯದ ದಿನಾಂಕವನ್ನು ಮಂಡಳಿ ತಿಳಿಸಿಲ್ಲ.ಬಾಂಗ್ಲಾದೇಶಕ್ಕೆ ಆಸ್ಟ್ರೇಲಿಯಾ ಕೈಗೊಳ್ಳುತ್ತಿರುವ ಮೂರನೇ ಪ್ರವಾಸ ಇದಾಗಿದೆ. ಇದಕ್ಕೂ ಮುನ್ನ 2006, 2007ರಲ್ಲಿ ಪ್ರವಾಸ ಕೈಗೊಂಡಿತ್ತು. 2007ರಲ್ಲಿ ಎರಡು ಪಂದ್ಯಗಳ ಸರಣಿಯಲ್ಲಿ ಇತ್ತಂಡಗಳು ತಲಾ ಒಂದು ಪಂದ್ಯ ಗೆದ್ದುಕೊಂಡಿದ್ದವು. ಆದರೆ 2006ರಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.ಇಂಗ್ಲೆಂಡ್ ಪ್ರವಾಸದ ನಂತರ ಬಾಂಗ್ಲಾದೇಶ ತವರಿಗೆ ಮರಳಿದ ಬಳಿಕ ಈ ಸರಣಿ ಆರಂಭವಾಗಲಿದೆ. ಬಾಂಗ್ಲಾದೇಶ, ಇಂಗ್ಲೆಂಡ್ ಪ್ರವಾಸದಲ್ಲಿ ಐರ್ಲೆಂಡ್ ವಿರುದ್ಧ ನಾಲ್ಕು ಟಿ20 ಮತ್ತು ಇತರ ತಂಡಗಳ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಏಪ್ರಿಲ್ ನಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಕೂಡ ಆಡಲು ಸಜ್ಜಾಗಿದೆ.