ಲಂಡನ್, ನ 11 : ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್ ನ ಅಗ್ರ ಎಂಟರಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರ ಗ್ರೀಸ್ನ ಸ್ಟಿಫಾನೋಸ್ ಸಿಟ್ಸಿಪಸ್ ಅವರು ವಿಶ್ವದ ನಾಲ್ಕನೇ ಶ್ರೇಯಾಂಕಿತ ಡೆನಿಯಲ್ ಮೆಡ್ವೆಡೆವ್ ವಿರುದ್ಧ ಮೊದಲ ಗೆಲುವು ಸಾಧಿಸಿದರು. ಸೋಮವಾರ ತಡರಾತ್ರಿ(ಭಾರತೀಯ ಕಾಲಮಾನ) ನಡೆದ ಸಿಂಗಲ್ಸ್ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದ ಸಿಟ್ಸಿಪಸ್, 7-6 (5), 6-4 ಅಂತರದಲ್ಲಿ ರಷ್ಯಾದ ಮೆಡ್ವೆಡೆವ್ ವಿರುದ್ಧ ಗೆಲುವಿನ ಸಂಭ್ರಮ ಆಚರಿಸಿದರು. ಇವರಿಬ್ಬರ ಆರನೇ ಮುಖಾಮುಖಿ ಇದಾಗಿತ್ತು. ಕಳೆದ ತಿಂಗಳಿನಲ್ಲಿ 23ರ ಪ್ರಾಯದ ಮೆಡ್ವೆಡೆವ್, ಶಾಂಘೈ ಮಾಸ್ಟರ್ಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ 7-6(5), 7-5 ಅಂತರದಲ್ಲಿ ಮಣಿಸಿದ್ದರು. ಆದರೆ, ಅದೇ ಪಾರಮ್ಯವನ್ನು ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಮುಂದುವರಿಸುವಲ್ಲಿ ವಿಫಲರಾಗಿ ಗ್ರೀಸ್ ಆಟಗಾರನಿಗೆ ಶರಣರಾದರು. "ಮಡ್ವಡೆವ್ ಅವರನ್ನು ಮೊದಲ ಪಂದ್ಯದಲ್ಲಿ ಸೋಲಿಸಿರುವುದು ಹೆಚ್ಚಿನ ವಿಶ್ವಾಸವನ್ನು ಮೂಡಿಸಿದೆ. ಈ ಗೆಲುವಿಗಾಗಿ ಹೆಚ್ಚು ದಿನಗಳಿಂದ ಕಾಯುತ್ತಿದ್ದೆ. ಕೊನೆಗೂ ಈ ಕ್ಷಣ ಈಡೇರಿತು." ಎಂದು ಸಿಟ್ಸಿಪಸ್ ಪಂದ್ಯದ ಬಳಿಕ ಹೇಳಿದರು. "ಎಂದಿನಂತೆ ಸಾಮಾನ್ಯ ಶಕ್ತಿ ಪಂದ್ಯದ ವೇಳೆ ನನ್ನ ಹಾದಿಯಲ್ಲಿ ಇರಲಿಲ್ಲ. ದೈಹಿಕವಾಗಿ ಅಲ್ಲದೇ, ಮಾನಸಿಕವಾಗಿಯೂ ಕೆಲವೊಂದು ನನಗೆ ವಂಚಿತವಾಗಿವೆ. ಈ ಪಂದ್ಯದ ಗೆಲುವು ಪಡೆಯುವಷ್ಟು ಶಕ್ತಿ ನನಗೆ ಇಲ್ಲವಾಯಿತು." ಎಂದು ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮೆಡ್ವೆಡೆವ್ ಬೇಸರ ವ್ಯಕ್ತಪಡಿಸಿದರು.