ಲಂಡನ್, ನ 15 : ಅಮೋಘ ಪ್ರದರ್ಶನ ತೋರಿದ ಸ್ವಿಸ್ ಆಟಗಾರ ರೋಜರ್ ಫೆಡರರ್ ಅವರು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಎಟಿಪಿ ಫೈನಲ್ಸ್ ನಲ್ಲಿ 16ನೇ ಬಾರಿ ಸೆಮಿಫೈನಲ್ಸ್ ಕದ ತಟ್ಟಿದರು. ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ರೋಜರ್ ಫೆಡರರ್ ಹಾಗೂ ಎರಡನೇ ಸ್ಥಾನದ ಜೊಕೊವಿಚ್ ವಿರುದ್ಧ ಭಾರಿ ಕಾದಾಟ ನಡೆದಿತ್ತು. ಆದರೆ, ಪಂದ್ಯದಲ್ಲಿ ಪ್ರಭುತ್ವ ಮೆರೆದ ಫೆಡರರ್ 6-4, 6-3 ಅಂತರದಲ್ಲಿ ಜೊಕೊವಿಚ್ ವಿರುದ್ದ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡಿದರು. ಸೋಲಿನೊಂದಿಗೆ ಸರ್ಬಿಯಾ ಆಟಗಾರನ ಎಟಿಪಿ ಕನಸು ಭಗ್ನವಾಯಿತು. ಅಲ್ಲದೇ, ವಷರ್ಾಂತ್ಯದಲ್ಲಿ ಅಗ್ರ ಸ್ಥಾನಕ್ಕೇರಬೇಕೆಂದು ಪಣ ತೊಟ್ಟಿದ್ದ ಜೊಕೊವಿಚ್ಗೆ ಭಾರಿ ನಿರಾಸೆ ಉಂಟಾಯಿತು. ಇದರ ಲಾಭದೊಂದಿಗೆ ಸ್ಪೇನ್ ನ ರಫೆಲ್ ನಡಾಲ್ ಅವರು ವೃತ್ತಿ ಜೀವನದ ಐದನೇ ಬಾರಿ ಅಲಂಕರಿಸಿರುವ ಅಗ್ರ ಸ್ಥಾನವನ್ನು ಉಳಿಸಿಕೊಂಡರು. ರೋಜರ್ ಫೆಡರರ್ ಹಾಗೂ ನೊವಾಕ್ ಜೊಕೊವಿಚ್ ಅವರು ಒಟ್ಟಾರೆ 49 ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಜೊಕೊವಿಚ್ 26-22 ಮುನ್ನಡೆ ಪಡೆದುಕೊಂಡಿದ್ದಾರೆ. ಕಳೆದ ಐದು ಬಾರಿ ಮುಖಾಮುಖಿಯಲ್ಲೂ ಜೊಕೊವಿಚ್, ಫೆಡರರ್ ಅವರನ್ನು ಮಣಿಸಿದ್ದರು. ಆದರೆ, ತಡರಾತ್ರಿ ಪದ್ಯದಲ್ಲಿ ಫೆಡರರ್ ಅವರ ಆಟದ ಮುಂದೆ ಜೊಕೊವಿಚ್ ಮಂಕಾದರು. ಕೇವಲ 73 ನಿಮಿಷಗಳಲ್ಲಿ ನೇರ ಸೆಟ್ಗಳಲ್ಲಿ ಸರ್ಬಿಯಾ ಆಟಗಾರ ಸೋಲು ಒಪ್ಪಿಕೊಂಡರು.