ಕೊಟ್ಟ ಮಾತು ಉಳಿಸಿಕೊಳ್ಳಲು ಎಐಯುಟಿಯುಸಿ ಆಗ್ರಹ

AIUTUC demands to keep its promise

ಕೊಟ್ಟ ಮಾತು ಉಳಿಸಿಕೊಳ್ಳಲು ಎಐಯುಟಿಯುಸಿ ಆಗ್ರಹ  

ಕಾರವಾರ, 17;  ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ರೂ.10000 ಮಾಸಿಕ ಗೌರವಧನದ ಆದೇಶ ಹೊರಡಿಸಬೇಕು ಮತ್ತು ರಾಜ್ಯ ಬಜೆಟ್‌ನಲ್ಲಿ ಹೇಳಿದಂತೆ ರೂ. 1000 ಹೆಚ್ಚಳದ ಆದೇಶ ಮಾಡಲು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರುಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಎಐಯುಟಿಯುಸಿಗೆ ಸೇರಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಜಿಲ್ಲಾ ಸಲಹೆಗಾರರಾದ ಗಂಗಾಧರ ಬಡಿಗೇರ ಮಾತನಾಡಿ ಹೋರಾಟದ 2025 ಜನವರಿ 7 ರಿಂದ 10 ನೇ ತಾರೀಖಿನವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರ ಅಹೋರಾತ್ರಿಯ ಹೋರಾಟ ನಡೆದ ಸಂದರ್ಭದಲ್ಲಿ ಮಾನ್ಯ ಮಂತ್ರಿಗಳು ಹೋರಾಟ ನಿರತ ಆಶಾ ಸಂಘದ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಆರೋಗ್ಯ ಸಚಿವರು ಸಮ್ಮುಖದಲ್ಲಿ ಎಪ್ರಿಲ್ 2025 ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.ಹತ್ತು ಸಾವಿರಗಳ ಗೌರವಧನವನ್ನು ನೀಡಲಾಗುವುದು ಎಂದು ಘೋಷಿಸಿರುತ್ತಾರೆ. 

ಇದನ್ನು ಹೊರತುಪಡಿಸಿ, ಕಾಂಪೋನೆಂಟ್ ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ.10,000 ಗ್ಯಾರಂಟಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂದಿದ್ದರು. 

 ಆದರೆ 2 ತಿಂಗಳು ಕಳೆದರೂ ಈ ಕುರಿತು ಭರವಸೆಯಂತೆ,ಆದೇಶ ದೊರೆತಿರುವುದಿಲ್ಲ. ನುಡಿದಂತೆ ನಡೆಯುವ ಸರ್ಕಾರ ರಾಜ್ಯದ 42ಸಾವಿರ ಆಶಾಗಳಿಗೆ ಆದೇಶ ಮಾಡಿ ತನ್ನ ಮಾತನ್ನು ಉಳಿಸಿಕೊಳ್ಳಬೇಕು ಎಂದರು.ಜಿಲ್ಲಾಧ್ಯಕ್ಷೆ ಪದ್ಮಾ ಚಲುವಾದಿ ಮಾತನಾಡಿ, ಮಾತು ಕೊಟ್ಟಂತೆ ಸೂಕ್ತ ಆದೇಶಗಳನ್ನು ಮಾಡುವ ಬದಲಾಗಿ, ಕಳೆದ 12 ವರ್ಷಗಳಿಂದ ಕೇವಲ ಮಾಸಿಕ ಆರು ಸಾವಿರಕ್ಕೆ ದುಡಿದ ಆಶಾ ಸುಗಮಕಾರರನ್ನು ಕೆಲಸದಿಂದ ಬಿಡುಗಡೆಯ ಆದೇಶ ಹೊರಡಿಸಿದ್ದಾರೆ. ಇದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಹಿಂದಿನ ಚರ್ಚೆಯಂತೆ ಸುಗಮಕಾರರಿಗೆ ಹೆಚ್ಚಿನ ಗೌರವಧನ, ದಿನ-ಪ್ರಯಾಣ ಭತ್ಯೆ ನೀಡಿ ಇವರಿಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಲು ಮರು ಆದೇಶ ಮಾಡಬೇಕು. ವಿವಿಧ ರಾಜ್ಯಗಳಲ್ಲಿ ಆಶಾಗಳ ಸೇವೆಯ ವಯಸ್ಸು 62 ಇದ್ದು, ಕರ್ನಾಟಕ ರಾಜ್ಯದಲ್ಲಿಯೂ ನಿವೃತ್ತಿ ವಯಸ್ಸನ್ನು 62 ಕ್ಕೆ ಮಾಡಿ ನಿವೃತ್ತಿ ಸೌಕರ್ಯಗಳನ್ನು ಜಾರಿ ಮಾಡಬೇಕು. ಈ ಕುರಿತು ಕೂಡ ಮರು ಆದೇಶ ಮಾಡಿ ನ್ಯಾಯ ದೊರಕಿಸಬೇಕು ಎಂದರು.ನಂತರ ಸಿಎಂ ರವರಿಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ನೀಡಲಾಯಿತು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಸಂಗೀತಾ ಅಂಗ್ರೊಳ್ಳಿ ವಹಿಸಿದ್ದರು. ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಮುಖಂಡರಾದ ಶ್ವೇತಾ ಕಪಡಸ್ಕರ, ಕವಿತಾ ಗಾವಡಾ,ಹಸೀನಾ ಮುಲ್ಲಾ, ಆಶಾ ಭಂಡಾರಕರ್, ವೀಣಾ ಜಾಡರಾಮನಕುಂಟೆ, ಅನ್ನಪೂರ್ಣ ನಾಯ್ಕ, ಸುಷ್ಮಾ ಮಡಿವಾಳ, ಪ್ರಭಾಮಣಿ ಶೆಟ್ಟಿ, ರಾಧಿಕಾ ನಾಯ್ಕ, ನಾಗರತ್ನ ಚಿಗಳಿ, ಪಾರ್ವತಿ ಪಾಟೀಲ್, ಮುಂತಾದವರು ವಹಿಸಿದ್ದರು.