ಬೆಂಗಳೂರು, ಮೇ 9,ಬಿಸಿಯೂಟ ತಯಾರಕ ಅಡುಗೆ ಸಿಬ್ಬಂದಿಯವರಿಗೆ 3 ತಿಂಗಳ ಸಂಭಾವನೆಯನ್ನು ಪರಿಹಾರವಾಗಿ ಘೋಷಿಸುವಂತೆ ಎಐಟಿಯುಸಿ ಸರ್ಕಾರವನ್ನು ಒತ್ತಾಯಿಸಿದೆ. ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಊಟ ಉಪಹಾರ ಯೋಜನೆಯಲ್ಲಿ 1.18 ಲಕ್ಷ ಮಂದಿ ಬಡ ಮಹಿಳೆಯರು ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ಮಾಸಿಕ ರೂ . 2700 ಹಾಗೂ ಇತರೆ ಸಿಬ್ಬಂದಿಯವರು ಮಾಸಿಕ ರೂ . 2600 ಗಳ ಸಂಭಾವನೆ ಪಡೆಯುತ್ತಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ ರೂ . 600 ಗಳಾಗಿರುತ್ತದೆ. ಉಳಿದ ಹಣವನ್ನು ಇದುವರೆಗೂ ಹಲವು ಹಂತಗಳಲ್ಲಿ ರಾಜ್ಯ ಸರ್ಕಾರವೇ ಭರಿಸಿದೆ. ರಾಜ್ಯ ಸರ್ಕಾರವೇ ಇತರ ಉದ್ಯೋಗಿಗಳಿಗೆ ಪ್ರಕಟಿಸಿರುವ ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವಾರು ಹೋರಾಟಗಳನ್ನು ನಿರಂತರವಾಗಿ ನಡೆಸಿದರೂ ಅವರಿಗೆ ನ್ಯಾಯವಾಗಿ ಬರಬೇಕಾದ ಸೌಲಭ್ಯಗಳು ಇನ್ನೂ ಬಂದಿಲ್ಲ ಎಂದು ಬಿಸಿಯೂಟ ತಯಾರಕರ ಫೆಡರೇಷನ್ ಬೇಸರ ವ್ಯಕ್ತಪಡಿಸಿದೆ.
2020ರ ಜನವರಿ 21 - 22ರಂದು ಎರಡು ದಿವಸಗಳ ಅಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿ ಶಿಕ್ಷಣ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಎಐಟಿಯುಸಿ ಫೆಡರೇಷನ್ ಮುಖಂಡರು ಚರ್ಚೆ ನಡೆಸಿದಾಗ ಬಜೆಟ್‌ನಲ್ಲಿ ಸಂಭಾವನೆ ಹೆಚ್ಚಿಸುವ ಭರವಸೆ ನೀಡಿದ್ದರೂ ಇನ್ನೂ ಕಾರ್ಯಗತವಾಗ ದಿರುವುದು ವಿಷಾದನೀಯ. ಅಡುಗೆ ಸಿಬ್ಬಂದಿಯವರು ಪಡೆಯುತ್ತಿರುವ ನಿಕೃಷ್ಟ ಸಂಭಾವನೆಯಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಕೋವಿಡ್ - 19 ವೈರಾಣು ಮಹಾಮಾರಿ ಯಿಂದ ಬಿಸಿಯೂಟ ತಯಾರಕ ಸಿಬ್ಬಂದಿ ಇನ್ನೂ ಬಲಿಪಶುಗಳಾಗಿದ್ದಾರೆ. ಎಲ್ಲಿಯೂ ಕೂಲಿಯೂ ಇಲ್ಲ . ತಿನ್ನಲು ಅನ್ನವೂ ಇಲ್ಲ. ಹೀಗಾಗಿ ಸರ್ಕಾರ ಅಡುಗೆ ತಯಾರಕರ ಸಿಬ್ಬಂದಿಯ ಮೂರು ತಿಂಗಳ ವೇತನವನ್ನು ಪರಿಹಾರವಾಗಿ ಘೋಷಿಸುವಂತೆ ಸರ್ಕಾರವನ್ನು ಎಐಟಿಯುಸಿ ಒತ್ತಾಯಿಸಿದೆ.