ಧಾರವಾಡ 24: ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಖಾತ್ರಿ ಪಡಿಸಬೇಕು ಹಾಗೂ 4200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಸಂಯೋಜನೆಯ ಹೆಸರಿನಲ್ಲಿ ಮುಚ್ಚುವುದನ್ನು ನಿಲ್ಲಿಸಬೇಕೆಂದು ಎಐಡಿಎಎಸ್‌ಓ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರಿಗೆ ಮನವಿ ಪತ್ರ ನೀಡಲಾಯಿತು.
ಎಐಡಿಎಎಸ್‌ಓ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಅವರು ಮಾತನಾಡಿ.... ಕಳೆದ ಮೂರು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಬರುವ ಪದವಿ, ಸ್ನಾತಕೋತ್ತರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭ್ಯವಾಗುತ್ತಿಲ್ಲ. ರಾಜ್ಯದ ಹಲವೆಡೆ ಕೆಲವು ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಒಂದೆಡೆ, ದಿನದಿಂದ ದಿನಕ್ಕೆ ಶಿಕ್ಷಣದ- ಅದರಲ್ಲೂ, ಉನ್ನತ ಶಿಕ್ಷಣದ ವೆಚ್ಚ ಅತ್ಯಂತ ಅಧಿಕವಾಗುತ್ತಿದೆ. ಆದರೆ ಇನ್ನೊಂದೆಡೆ, ಕ್ರಮೇಣವಾಗಿ ವಿದ್ಯಾರ್ಥಿ ವೇತನ ಕಡಿತಗೊಳುತ್ತಿರುವುದರಿಂದ ಅಧಿಕ ಪ್ರಮಾಣದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುವ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದಾರೆ. ಅದರಲ್ಲೂ ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತರಾಗಿರುವ ರೈತ, ಕಾರ್ಮಿಕರನ್ನೊಳಗೊಂಡಂತೆ ಬಡಜನರ ಮಕ್ಕಳ ಶಿಕ್ಷಣದ ಕನಸುಗಳು ಇದರಿಂದ ಛಿದ್ರಗೊಳ್ಳುತ್ತಿವೆ. ರಾಜ್ಯ ಸರ್ಕಾರವು ಈ ಕುರಿತು ಸೂಕ್ತ ಪರಿಹಾರ ಒದಗಿಸಬೇಕೆಂಬುದು ರಾಜ್ಯದ ವಿದ್ಯಾರ್ಥಿಗಳ ಅಳಲು.
ಇತ್ತೀಚೆಗಷ್ಟೆ ರಾಜ್ಯ ಸರ್ಕಾರವು ' ಹಬ್ ಅಂಡ್ ಸ್ಪೋಕ್' ಅಡಿಯಲ್ಲಿ ಕಡಿಮೆ ಹಾಜರಾತಿ ಇರುವ ಸರ್ಕಾರಿ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸುಧಾರಣಾ ಸಮಿತಿಯನ್ನು ಸಹ ರಚಿಸಲಾಗಿದೆ. ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ರಾಜ್ಯದಲ್ಲಿ 4 ಸಾವಿರಕ್ಕೂ ಅಧಿಕ ಶಾಲೆಗಳು 10 ಮಕ್ಕಳಿಗಿಂತ ಕಡಿಮೆ ದಾಖಲಾತಿಯನ್ನು ಹೊಂದಿವೆ. ಈ ಶಾಲೆಗಳ ಭವಿಷ್ಯದ ಕುರಿತು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ತಲೆದೊರಿದೆ. ಸರ್ಕಾರವು ರಾಜ್ಯದ ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕೆಂಬುದು ರಾಜ್ಯದ ವಿದ್ಯಾರ್ಥಿಗಳ ಆಶಯ.
ಆದ್ಯತೆಯ ಮೇರೆಗೆ ಸರ್ಕಾರವು ಶಿಕ್ಷಣಕ್ಕೆ ಬಜೆಟ್ ನಲ್ಲಿ ಅನುದಾನ ನಿಗದಿಪಡಿಸಬೇಕು ಮತ್ತು ಎಲ್ಲ ವಿಭಾಗದ ಮತ್ತು ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಖಾತ್ರಿ ಪಡಿಸಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಸಂಯೋಜನೆಗೊಳಿಸುವ ಬದಲು ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯ ನೀಡಿ ರಕ್ಷಿಸಬೇಕೆಂದು ಈ ಮೂಲಕ ಎಐಡಿಎಎಸ್‌ಓ ಆಗ್ರಹಪೂರ್ವಕ ಮನವಿ ಮಾಡುತ್ತೇವೆ ಎಂದರು.
*ವಿದ್ಯಾರ್ಥಿವೇತನದ ಕುರಿತು ಬಿಸಿಎಂ ಇಲಾಖೆಯ ಅಧಿಕೃತ ಮಾಹಿತಿ*
ಶೈಕ್ಷಣಿಕ ವರ್ಷ ವಿದ್ಯಾರ್ಥಿವೇತನ ದೊರೆಯದ ವಿದ್ಯಾರ್ಥಿಗಳು
2020-21 26236
2021-22 107735
2022-23 104376
2023-24 252025
ಒಟ್ಟು 490372
ಬೇಡಿಕೆಗಳು: ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಖಾತ್ರಿಪಡಿಸಿ. *ಶಾಲೆಗಳ ಸಂಯೋಜನೆಯನ್ನು ಕೈಬಿಟ್ಟು ಸಮರ್ಪಕ ಸೌಲಭ್ಯ ನೀಡಿ ಸರ್ಕಾರಿ ಶಾಲೆಗಳನ್ನು ಬಲಪಡಿಸಿ.
ಈ ಸಂದರ್ಭದಲ್ಲಿ ಎಐಡಿಎಎಸ್‌ಓ ಜಿಲ್ಲಾ ಅಧ್ಯಕ್ಷರಾದ ಸಿಂಧೂ ಕೌದಿ, ಕಚೇರಿ ಕಾರ್ಯದರ್ಶಿ ಸ್ಪೂರ್ತಿ ಚಿಕ್ಕಮಠ, ಕಾರ್ಯಕರ್ತರಾದ ಶಾಂತೇಶ, ಸಿದ್ದು ಅವರು ಉಪಸ್ಥಿತರಿದ್ದರು.