ನಗರ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಅಮೃತ್ ಪೌಲ್ ...!!!

ಬೆಂಗಳೂರು, ಮೇ 17,ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಲಿದ್ದು, ಅವರ ಸ್ಥಾನಕ್ಕೆ ತರಬೇತಿ ಮತ್ತು ನೇಮಕಾತಿ ಎಡಿಜಿಪಿ ಅಮೃತ್ ಪೌಲ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಲಾಕ್ ಡೌನ್ ವೇಳೆ ಆದ ಘಟನಾವಳಿಗಳು ಹಾಗೂ ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಮತ್ತು ಭಾಸ್ಕರ್ ರಾವ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡುವ ತೀರ್ಮಾನ ಕೈಗೊಳ್ಳಾಲಾಗಿದೆ ಎನ್ನಲಾಗಿದೆ.
ಭಾಸ್ಕರ್ ರಾವ್ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಅಮೃತ್ ಪೌಲ್ ಹೆಸರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ತಡರಾತ್ರಿ ನಡೆದ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ನಿವಾಸ ಧವಳಗಿರಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಆಪ್ತ ವಲಯದ ಕೆಲ ಸಚಿವರು ಸಭೆಯಲ್ಲಿ ಸುಧೀರ್ಘ ಚೆರ್ಚೆ ನಡೆಸಿದ್ದಾರೆ.
ಇದೇ ವೇಳೆ ಪೊಲೀಸ್ ಆಯುಕ್ತರ ಹುದ್ದೆಗೆ ಗುಪ್ತಚರ ದಳದ ಎಡಿಜಿಪಿ ಕಮಲ್ ಪಂತ್ ಹೆಸರು ಚಲಾವಣೆಯಲ್ಲಿತ್ತು. ಕಮಲ್ ಪಂತ್ ಸ್ಥಾನಕ್ಕೆ ಹಾಗೂ ಸರ್ಕಾರದ ಪ್ರಮುಖ ಹುದ್ದೆಯಾದ ಗುಪ್ತಚರ ವಿಭಾಗಕ್ಕೆ ಯಾರನ್ನು ನೇಮಿಸಬೇಕು ಎಂಬ ಕುರಿತು ಸುಧೀರ್ಘ ಚೆರ್ಚೆ ನಡೆಸಲಾಗಿತ್ತು. ಆದರೆ ಗುಪ್ತದಳದಿಂದ ಅವರನ್ನು ಬದಲಾಯಿಸುವುದು ಬೇಡ ಎಂಬ ನಿರ್ಣಯಕ್ಕೆ ಬರಲಾಗಿದೆ.
ಹೀಗಾಗಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಅಮೃತ್ ಪೌಲ್ ಹೆಸರು ಚಾಲ್ತಿಗೆ ಬಂದಿತ್ತು ಎನ್ನಲಾಗಿದೆ. ಅಮರ್ ಕುಮಾರ್ ಪಾಂಡೆ ಬಿಜೆಪಿಯ ಮಾತೃ ಸಂಸ್ಥೆಯ ಪ್ರಮುಖರ ಮೂಲಕ ಆಯುಕ್ತರ ಹುದ್ದೆಗಾಗಿ ಲಾಬಿ ನಡೆಸಿದ್ದರು ಎನ್ನಲಾಗಿದೆ. ಇದರ ಜೊತೆಗೆ 1991 ಬ್ಯಾಚ್ ನ ಸುನಿಲ್ ಅಗರ್ವಾಲ್ ಹೆಸರು ಕೆಲ ಹೊತ್ತು ಬಿಸಿ ಬಿಸಿ ಚೆರ್ಚಗೆ ಗ್ರಾಸವಾಗಿತ್ತು. ಉತ್ತರ ಭಾರತ ಮೂಲದ ಸುನಿಲ್ ಅಗರ್ವಾಲ್ ಉತ್ತರ ಪ್ರದೇಶದ ಸರ್ಕಾರದ ಪ್ರಭಾವವನ್ನು ಬಳಸಿ ಆಯುಕ್ತರ ಹುದ್ದೆಗೆ ಏರುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.
  ಈ ನಡುವೆ ಅಮೃತ್ ಪೌಲ್ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಸಾಕಷ್ಟು ಒತ್ತಡ ಮತ್ತು ಲಾಬಿ ನಡುವೆಯೂ ಕಿಚನ್ ಕ್ಯಾಬಿನೆಟ್ ನಲ್ಲಿ ಅಮೃತ್ ಪೌಲ್ ಪೊಲೀಸ್ ಆಯುಕ್ತರ ಹೆಸರನ್ನು ಅಂತಿಮಗೊಳಿಸಲಾಗಿದೆ.ಈ ಸಂಬಂಧ ಸೋಮವಾರ ಬೆಳಿಗ್ಗೆ ಅಧಿಕೃತ ಆದೇಶ ಹೊರಬೀಳಲಿದ್ದು, ಭಾಸ್ಕರ್ ರಾವ್ ಅವರಿಗೆ ಚರಣ್ ರೆಡ್ಡಿ, ಸಂಜಯ್ ಸಹಾಯ್ ಅವರು ನಿರ್ವಹಿಸುತ್ತಿದ್ದ ಇಲಾಖೆ ಅಥವಾ ಕೆಎಸ್ ಆರ್ ಪಿಗೆ ಮತ್ತೆ ವರ್ಗಾವಣೆಗೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.ಭಾಸ್ಕರ್ ರಾವ್ ಅವರ ಮೇಲಿರುವ ಆರೋಪಗಳು..?
ಕೊರೋನಾ ಲಾಕ್ ಡೌನ್ ದಿಂದಾಗಿ  ದೇವಸ್ಥಾನದಲ್ಲಿ ಪೂಜೆ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ ವಿಧಿಸಿದ್ದರೂ ಇತ್ತೀಚೆಗೆ  ಆಯುಕ್ತರು ಚರ್ಚ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಇನ್ನು, ಕಠಿಣ ಲಾಕ್ ಡೌನ್ ಹಾಗೂ ಕೊರೋನಾ ಹಾಟ್ ಸ್ಪಾಟ್ ಪಾದರಾಯನಪುರದಲ್ಲಿ ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿರುವುದೇ ವರ್ಗಾವಣೆಗೆ ಪ್ರಮುಖ ಕಾರಣ ಎನ್ನಲಾಗಿದೆ.
 ಅಲ್ಲದೇ, ಹೈಕೋರ್ಟ್ ಕೂಡ ಹಲವಾರು ಅರ್ಜಿ ವಿಚಾರಣೆ ವೇಳೆ ಬಿಬಿಎಂಪಿ ಮತ್ತು ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತ್ತು. ಕಳೆದ ಮೂರು ದಿನಗಳಿಂದ ಭಾಸ್ಕರ್ ರಾವ್ ವರ್ಗಾವಣೆ ಕುರಿತಂತೆ ಮುಖ್ಯಮಂತ್ರಿ ಕಚೇರಿ ಹಾಗೂ ಸಚಿವಾಲಯದಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಕೆಲ ದಿನಗಳಿಂದ ಕಮಲ್ ಪಂತ್ ಹೆಸರು ಚಲಾವಣೆಯಲ್ಲಿ….!!
ನಾಲ್ಕೈದು ದಿನಗಳಿಂದ ಕಮಲ್ ಪಂತ್ ಅವರ ಹೆಸರೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ  ಹುದ್ದೆಗೆ ನೇಮಕವಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಏಕಾಏಕೀ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮಧ್ಯಪ್ರವೇಶದಿಂದ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ಬದಲಾವಣೆ ಆಗಿದೆಯಂತೆ. ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವರ್ಗಿಯಲ್ಲಿ ಇತ್ತೀಚಗೆ ಬಿ.ವೈ.ವಿಜಯೇಂದ್ರ ಸೂಚಿಸಿದವರಿಗೆ ಪ್ರಮುಖ ಹುದ್ದೆಗಳು ಲಭ್ಯವಾಗುತ್ತಿವೆ ಎಂಬ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದೆ.