ಕೊರೋನಾ ಸೋಂಕು ತಡೆಗಟ್ಟಲು ಸಮರೋಪಾದಿಯಲ್ಲಿ ಕ್ರಮ, ಶರಣಬಸಪ್ಪ ಜಾತ್ರೆ ರದ್ದು: ಯಡಿಯೂರಪ್ಪ

ಬೆಂಗಳೂರು, ಮಾ  13, ಕೊರೋನಾ ಸೋಂಕು ಹರಡದಂತೆ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಪ್ರಯೋಗಾಲಯ ಆರಂಭ ಸೇರಿದಂತೆ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳುತ್ತಿದೆ. ಕಲಬುರಗಿಯಲ್ಲಿ ನಡೆಯುತ್ತಿರುವ ಶರಣಬಸಪ್ಪ ಜಾತ್ರೆಯನ್ನು ಸರ್ಕಾರ  ರದ್ದುಪಡಿಸಿದ್ದು, ಕಲಬುರಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ  ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಕೊರೊನಾ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ಕೋವಿಡ್ 19ಕ್ಕೆ ಮೊದಲ ಸಾವು ತಮ್ಮ ಜಿಲ್ಲೆಯಲ್ಲಿ ಆಗಿರುವುದು ದುರದೃಷ್ಟಕರ. ಮೃತ  ವ್ಯಕ್ತಿಯಲ್ಲಿ ಕೊರೋನಾ ಸೋಂಕು ಇತ್ತು ಎಂಬುದರ ಬಗ್ಗೆ ನಿನ್ನೆ ದೃಢಪಟ್ಟಿದೆ. ಆದರೆ  ಪಿಐಬಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಪ್ಪು  ಮಾಹಿತಿ ನೀಡಲಾಗಿದೆ.  ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಇದರಲ್ಲಿ ಮುಚ್ಚಿಡಲಾಗಿದೆ  ಎಂದು ಟೀಕಿಸಿದರು.

ಕಲಬುರಗಿಯ 74 ವರ್ಷ ಪ್ರಾಯದ ಮುಹಮ್ಮದ್ ಹುಸೈನ್  ಸಿದ್ದೀಕಿ ಎಂಬವರು ಜನವರಿ 28ರಂದು ಪವಿತ್ರಾ ಯಾತ್ರೆಗಾಗಿ ಜಿದ್ದಾಕ್ಕೆ ಹೋಗಿ  ಉಮ್ರಾ ಯಾತ್ರೆ ಮುಗಿಸಿ ಫೆಬ್ರವರಿ 29ರಂದು ಹೈದರಾಬಾದ್ ಮೂಲಕ ಬರುತ್ತಾರೆ. ವಿಮಾನ  ನಿಲ್ದಾಣದಲ್ಲಿ ಅವರ ತಪಾಸಣೆಯನ್ನು ಯಾರೂ ನಡೆಸುವುದಿಲ್ಲ. ಅವರನ್ನು ಅವರ ಮಗ ಮತ್ತು  ಕಾರಿನ ಚಾಲಕ ಕಲಬುರಗಿಗೆ ಕರೆತರುತ್ತಾರೆ ಎಂದು ವಿವರಿಸಿದರು.ಸಿದ್ದೀಕಿ  ಅವರ ಉಮ್ರಾಕ್ಕೆ ಹೋಗಿ ಬಂದ ಹಿನ್ನೆಲೆಯಲ್ಲಿ ಅವರ ಸ್ನೇಹಿತರು, ಕುಟುಂಬಸ್ಥರು ಸೇರಿ  ನೂರಾರು ಮಂದಿ ಅವರ ಮನೆಗೆ ಬಂದು ಅವರಿಗೆ ಶುಭಾಷಯ ಕೋರುತ್ತಾರೆ. ಮಾರ್ಚ್ 8ರಂದು  ಸಿದ್ದೀಕಿ ಅವರಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಕುಟುಂಬ ವೈದ್ಯರು ಅವರಿಗೆ ಸಾಮಾನ್ಯ  ಜ್ವರಕ್ಕೆ ಔಷಧಿ ನೀಡುತ್ತಾರೆ. ಆದರೆ ಮಾ.9ರಂದು ಜ್ವರ ತೀವ್ರಗೊಂಡಾಗ ಅವರನ್ನು  ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ವೈದ್ಯರು ಅವರ ರಕ್ತದ ಮಾದರಿಯನ್ನು ತೆಗೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಆದರೆ ಅವರ ಮೇಲೆ ನಿಗಾ ಇಡಲಿಲ್ಲ. ರೋಗಿ ನೇರವಾಗಿ ಹೈದರಾಬಾದ್ಗೆ ತೆರಳಿ ಅಲ್ಲಿ ನಾಲ್ಕೈದು ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಎಲ್ಲರೂ ನಿರ್ಲಕ್ಷ್ಯ ವಹಿಸಿ ಮತ್ತೆ ಕಲಬುರಗಿಗೆ ಕಳುಹಿಸಿದ್ದಾರೆ. ಊರಿಗೆ ಬರುವಾಗ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನೂರಾರು ಜನರು ಭಾಗವಹಿಸಿ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ. ಇಲ್ಲಿ ಕೊರೊನಾ ಶಂಕೆ ಇದ್ದರೂ ಸೂಕ್ತ ಚಿಕಿತ್ಸೆ ನೀಡದೇ ಕರ್ತವ್ಯ ಲೋಪ  ಎಸಗಲಾಗಿದೆ. ಮುಂಜಾಗೃತಾ ಕ್ರಮವನ್ನೂಕೈಗೊಂಡಿಲ್ಲ ಎಂದು ಟೀಕಿಸಿದರು. ಬಿಜೆಪಿಯ  ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಕಲಬುರಗಿಯಲ್ಲಿ ಶರಣ ಬಸವೇಶ್ವರ ಜಾತ್ರೆ  ನಡೆಯುತ್ತಿದೆ ಮುಂಜಾಗ್ರತಾ ಕ್ರಮ ಅಗತ್ಯ ಇದೆ, ಕೊರೊನಾ ಕಿಟ್ ಒದಗಿಸಿದರೆ ಅನುಕೂಲ  ಆಗಲಿದೆ ಎಂದರು.ಕಾಂಗ್ರೆಸ್ ನ  ಅಜಯ್ ಸಿಂಗ್, ಮೃತ ವ್ಯಕ್ತಿ ಸಾವಿರಾರು ಜನರ ಸಂಪರ್ಕ ಮಾಡಿದ್ದಾರೆ. ಯಾವಾಗ ಬೇಕಾದರೂ  ಇದು ಸೋಂಕು ಹರಡಬಹುದು. ಹಾಗಾಗಿ ಮುಂಜಾಗ್ರತಾ ವಹಿಸಬೇಕಿದೆ.

ಕಲಬುರಗಿಯಲ್ಲಿ ಪ್ರಯೋಗಾಲಯ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.ಸದಸ್ಯರ  ಪ್ರಶ್ನೆಗೆ ಉತ್ತರಿಸಿ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಸೌದಿಯಿಂದ ವಾಪಸ್ ಬಂದ  ವ್ಯಕ್ತಿಗೆ ಹೈದರಾಬಾದ್ ನಲ್ಲಿ ತಪಾಸಣೆ ಮಾಡಿದ್ದಾರೆ, ನಂತರದಲ್ಲಿ ಜ್ವರ  ಕಾಣಿಸಿಕೊಂಡಿದೆ. ಹಾಗಾಗಿ ಗುಲಬರ್ಗಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ., ಕೊರೊನಾ  ಶಂಕೆ ಕಂಡುಬಂದ ಕಾರಣ ಐಸೊಲಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ  ಯಾರದ್ದೋ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಗೆ ಹೋಗಿದ್ದಾರೆ. ಮತ್ತೆ ಅಲ್ಲಿನ  ವೈದ್ಯರ ಸಲಹೆ ಮೇರೆಗೆ ವಾಪಸ್ ಬರಬೇಕಾದರೆ ಮಾರ್ಗ ಮಧ್ಯದಲ್ಲೇ ಮರಣ ಹೊಂದಿದ್ದಾರೆ. ಆದರೆ  ಕೊರೊನಾ ಸಂಬಂಧ ಕೇಂದ್ರದ ನಿಯಮಾವಳಿಯಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಅಂತ್ಯಕ್ರಿಯೆ  ನಡೆಸಲಾಗಿದೆ. ಆ ಕುಟುಂಬದ ಇಬ್ಬರಲ್ಲಿ ಶಂಕೆ ಕಂಡುಬಂದ ಕಾರಣ ಮಾದರಿಯನ್ನು ಪರೀಕ್ಷೆಗೆ  ಕಳಿಸಲಾಗಿದೆ. ಕುಟುಂಬ ಸದಸ್ಯರು ಸೇರಿ 25 ಜನರಿಗೆ ಐಸೊಲೋಷನ್ ವಾರ್ಡ್ ನಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ.

ಹಾಗಾಗಿ  ಯಾರು ಭಯಪಡಬೇಕಿಲ್ಲ, ಅಗತ್ಯ ಕ್ರಮ  ಕೈಗೊಳ್ಳಲಾಗುತ್ತಿದೆ, 5 ಕೇಸು  ಪಾಸಿಟಿವ್ ಬಂದಿದೆ ಅವರು ರಿಕವರ್ ಆಗುತ್ತಿದ್ದಾರೆ,  ಶಂಕಿತ 600 ಮಂದಿ ಗುಣಮುಖರಾಗುತ್ತಿದ್ದಾರೆ, ಪಾಸಿಟಿವ್ ಕೇಸ್ ಕಂಡುಬಂದಾಗ ಅವರ ನಿವಾಸ  ಕಚೇರಿ ಇತ್ಯಾದಿ ಕಡೆ ನಿಗಾ ಇಟ್ಟಿದ್ದೇವೆ. ಯಾರೂ ಆತಂಕ ಪಡಬೇಕಿಲ್ಲ, ದಿನದ 24 ಗಂಟೆ  ನಾವು ಸನ್ನದ್ಧರಾಗಿದ್ದೇವೆ ಎಂದರು.ದುಬಾರಿ  ಬೆಲೆಗೆ ಮಾಸ್ಕ್ ಮಾರಾಟ ಮಾಡಿದರೆ ಅಂತಹ ಔಷಧ ಅಂಗಡಿ ಪರವಾನಿಗ ರದ್ದು ಮಾಡುತ್ತೇವೆ,  ಬೆಂಗಳೂರಿನ ಜೊತೆಗೆ ಶಿವಮೊಗ್ಗ, ಮೈಸೂರು, ಹಾಸನ, ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರ  ಸ್ಥಾಪನೆ ಮಾಡಿದ್ದು,, ಬಳ್ಳಾರಿ ಆರಂಭಿಸಲಾಗುತ್ತಿದೆ, ಬೆಳಗಾವಿ,  ಹುಬ್ಬಳ್ಳಿ,ಕಲಬುರಗಿಯಲ್ಲಿ ಪರೀಕ್ಷಾ  ಕೇಂದ್ರ ಆರಂಭಕ್ಕೆ ಸೂಚನೆ ನೀಡಲಾಗಿದೆ ಎಂದರು.ಆರೋಗ್ಯ  ಸಚಿವರ ಉತ್ತರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು,ಈ  ಪ್ರಕರಣದಲ್ಲಿ ಕಲಬುರಗಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹೈದರಾಬಾದ್ ವಿಮಾನ  ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಿಲ್ಲ, ಕಲಬುರಗಿಯಲ್ಲಿ ಪ್ರಯೋಗಾಲಯ ಇಲ್ಲ, ಇಷ್ಟಾದರೂ  ಅಲ್ಲಿ ಯಾಕೆ ಪ್ರಯೋಗಾಲಯ ಮಾಡಿಲ್ಲ, ಇದು ಸರ್ಕಾರದ ವೈಫಲ್ಯ, ಇದು ಭಯಾನಕ ರೋಗ, ಭಯ  ಅಗತ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.

ಆದರೆ ಅಂತಹ ಸ್ಥಿತಿ ಇಲ್ಲ, ಸಮರೋಪಾದಿಯಲ್ಲಿ  ಎಲ್ಲಾ ಜಿಲ್ಲೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು, ಸಿಎಂ ಹೇಳಿ ಒಂದು ವಾರ ಆದರೂ  ಕಲಬುರಗಿಯಲ್ಲಿ ಒಂದು ಪ್ರಯೋಗಾಲಯ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಅಲ್ಲಿಗೆ  ತಜ್ಞರನ್ನು ಕರೆದೊಯ್ಯಿರಿ, ಜನರಿಗೆ ಧೈರ್ಯತುಂಬಿ, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ಎಲ್ಲಾ  ಜಿಲ್ಲಾ ಕೇಂದ್ರದಲ್ಲಿ ಪ್ರಯೋಗಾಲಯ ತೆರೆಯಬೇಕು, ನೀವು ಕೂಡ ಹೋಗಿ ರಾಜ್ಯ ಪ್ರವಾಸ ಮಾಡಿ  ಪರಿಶೀಲಿಸಿ. ಹಿಂದೆ ಕಾಲರ, ಪ್ಲೇಗು ಬಂದಾಗ ಮನೆ ಮನೆಗೆ ಹೋಗಿ ತಪಾಸಣೆ ಮಾಡುತ್ತಿದ್ದರು,  ಈಗ ನಿಮ್ಮ ಇಲಾಖೆಯ ಆಶಾ ಕಾರ್ಯಕರ್ತರನ್ನು ಕಳಿಸಿ ಮನೆ ಮನೆಗೆ ಹೋಗಿ ಮಾಹಿತಿ ಕಲೆಹಾಕಿ  ಎಂದು ಸಲಹೆ ನೀಡಿದರು.ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೊದಲ ಸಾವು ರಾಜ್ಯದಲ್ಲಿ ಉಂಟಾಗಿರುವುದ  ಆಘಾತ ತರುವ ಘಟನೆ. ಇದರಿಂದ ನಮಗೆ ಯಾರಿಗೂ ಸಮಾಧಾನ ಇಲ್ಲ. ವರದಿ ಬರುವವರೆಗೂ ಕೊರೊನಾ ಎಂದು ಗೊತ್ತಿಲ್ಲದ ಕಾರಣ ಈ ಅಚಾತುರ್ಯ  ಆಗಿದೆ. ಈಗಾಗಲೇ ವಿಮಾನದ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಿ ತಪಾಸಣೆ ಮಾಡಲಾಗುತ್ತಿದೆ, ಸತ್ತ ವ್ಯಕ್ತಿಯ ಸಂಬಂಧಿಕರು ಅವರು ಓಡಾಡಿದ ಎಲ್ಲ ಕಡೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು.ಕಲಬುರಗಿ  ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲು ಸೂಚಿಸಿದ್ದು, ಶರಣಬಸವೇಶರ ಜಾತ್ರೆ ರದ್ದು  ಮಾಡಿದ್ದೇವೆ, ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಲ್ಯಾಬ್  ಸ್ಥಾಪನೆ ಮಾಡಲಿದ್ದೇವೆ  ಎಲ್ಲಾ ವ್ಯವಸ್ಥೆ ಮಾಡಲಿದ್ದೇವೆ, ಪ್ರತಿಪಕ್ಷಗಳ ಎಲ್ಲಾ ಸಲಹೆ ಪರಿಗಣಿಸಿ  ಅನುಷ್ಠಾನಕ್ಕೆ ತರಲಿದ್ದೇವೆ. ಇಂದು ಇದೇ ವಿಷಯಕ್ಕೆ ಸಂಬಂಧಿಸಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.