ಹೈದರಾಬಾದ್, ಜ 21 : ಪ್ರತಿ ವಲಯಕ್ಕೆ ಒಬ್ಬೊಬ್ಬ ಉಪಮುಖ್ಯಮಂತ್ರಿಗಳನ್ನು ನಿಯೋಜಿಸಿ ಸುದ್ದಿ ಮಾಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ, ಇದೀಗ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಎಂಬ ಮೂರು ರಾಜಧಾನಿಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಈ ಕುರಿತು ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳನ್ನೊಳಗೊಂಡ ಅಭಿವೃದ್ಧಿ ಮಸೂದೆಗೆ ಟಿಡಿಪಿ ಹಾಗೂ ಕಾಂಗ್ರೆಸ್ ವಿರೋಧದ ನಡುವೆ ವಿಧಾನಸಭೆ ನಿನ್ನೆ ಅಂಗೀಕಾರ ನೀಡಿದೆ. ಆದರೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ ಪಡೆಯುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ಪರಿಷತ್ತಿನಲ್ಲಿ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ನ ಕೇವಲ 9 ಸದಸ್ಯರನ್ನು ಹೊಂದಿದೆ. ಈ ಕುರಿತ ಮಸೂದೆ ಅಂಗೀಕಾರ ಪಡೆಯಲು 58 ಸದಸ್ಯಬಲದ ಸದನದಲ್ಲಿ ಕನಿಷ್ಠ 29 ಸದಸ್ಯರ ಬೆಂಬಲ ಅಗತ್ಯವಾಗಿದೆ. ಇದು ಮುಖ್ಯಮಂತ್ರಿ ಅವರಿಗೆ ಸವಾಲಾಗಿ ಪರಿಣಮಿಸಿದೆ.
ಈ ಮಧ್ಯೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಏಳು ಮಂದಿ ಟಿಡಿಪಿ ಶಾಸಕರನ್ನು ನಿನ್ನೆ ಒಂದು ದಿನದ ಮಟ್ಟಿಗೆ ಸಭೆಯಿಂದ ಅಮಾನತ್ತು ಮಾಡಲಾಗಿತ್ತು.
ಕಾರ್ಯಾಂಗದ ರಾಜಧಾನಿಯಾಗಿ ವಿಶಾಖಪಟ್ಟಣಂ, ಶಾಸಕಾಂಗ ರಾಜಧಾನಿಯಾಗಿ ಅಮರಾವತಿ ಹಾಗೂ ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿ ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ. ಇಷ್ಟೇ ಅಲ್ಲದೆ ರಾಜ್ಯವನ್ನು ವಿವಿಧ ವಲಯಗಳನ್ನಾಗಿ ವಿಭಾಗ ಮಾಡಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಮಸೂದೆ ಅನುಸಾರ ವಲಯ ಯೋಜನೆ ಹಾಗೂ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಲು ಅವಕಾಶವಿದೆ.