58 ಕಾರ್ಮಿಕರ ಜೀವ ಉಳಿಸಿದ ಸಾಮಾಜಿಕ ಜಾಲತಾಣ

ಚಿತ್ರದುರ್ಗ, ಮೇ 29,ಕೊರೊನಾಗೆ ಬಲಿಯಾಗುತ್ತಿದ್ದ 58 ಕಾರ್ಮಿಕರ ಪ್ರಾಣವನ್ನು ಸಾಮಾಜಿಕ ಜಾಲತಾಣ ಬದುಕುಳಿಸಿದೆ.ಅನ್ನ,  ನೀರಿಲ್ಲದೇ ತಮಿಳುನಾಡಿನ ಚೆನ್ನೈ ನಿಂದ ಉತ್ತರ ಪ್ರದೇಶದತ್ತ  ಕಂಟೈನರ್ ನಲ್ಲಿ  ಪ್ರಯಾಣಿಸುತ್ತಿದ್ದ 58 ಮಂದಿ ಕಾರ್ಮಿಕರನ್ನು ರಾಜ್ಯ ಪೊಲೀಸರು ಚಿತ್ರದುರ್ಗ ಜಿಲ್ಲೆಯ  ಚಳ್ಳಕೆರೆ ತಾಲೂಕಿನ ನಾಗಪ್ಪನಹಳ್ಳಿ ಚೆಕ್ ಪೋಸ್ಟ್ ಬಳಿ ಕಂಟೈನರ್ ತಡೆದು ಕಾರ್ಮಿಕರನ್ನು  ರಕ್ಷಿಸಿದ್ದಾರೆ.ತಮಿಳುನಾಡಿನ ಚೆನ್ನೈನಿಂದ ಉತ್ತರ ಪ್ರದೇಶಕ್ಕೆ ತೆರಳಲು ಸರ್ಕಾರದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕಾರ್ಮಿಕರೆಲ್ಲರೂ ಕಂಟೈನರ್ ನಲ್ಲಿ ಉತ್ತರ ಪ್ರದೇಶದತ್ತ ಪ್ರಯಾಣ ಬೆಳೆಸಿದರು‌.ಅನ್ನ-ನೀರು,  ಗಾಳಿ-ಬೆಳಕು ಇಲ್ಲದೇ  ಕಂಟೈನರ್ ನಲ್ಲಿ ಒಬ್ಬರ ಮೇಲೊಬ್ಬರು ಕುಳಿತು ನರಕ ಯಾತನೆ  ಅನುಭವಿಸುತ್ತಿದ್ದ ದೃಶ್ಯವೊಂದನ್ನು ಕಂಟೈನರ್ ನಲ್ಲಿ ಪ್ರಯಾಣಿಸುತ್ತಿದ್ದ  ಕಾರ್ಮಿಕನೋರ್ವ ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದರು.ಇಲ್ಲಿ  ತಮಗೆ ಊಟವಿಲ್ಲ, ಕೆಳಗೆ ಇಳಿದರೆ ಜನ ಕಲ್ಲಲ್ಲಿ ಹೊಡಿಯುತ್ತಾರೆ ಎಂದು  ತನ್ನ  ಅಳಲು  ತೋಡಿಕೊಂಡಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆ  ಎಚ್ಚೆತುಕೊಂಡು ತಕ್ಷಣವೇ ಜಿಲ್ಲಾ ಪೊಲೀಸರಿಗೆ ಮಾಹಿತಿ ರವಾನಿಸಿದರು. ನಂತರ ಸ್ಥಳೀಯ ಪೊಲೀಸರು ಅವರನ್ನು ನಾಗಪ್ಪನಹಳ್ಳಿ ಚೆಕ್ ಪೋಸ್ಟ್ ಬಳಿ ತಡೆದಿದ್ದರು.ಸ್ಥಳೀಯ  ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಆಗಿರುವ ಕಾರ್ಮಿಕರ ಪೈಕಿ 27 ಜನರಿಗೆ ಕೊರೊನಾ  ದೃಢಪಟ್ಟಿದ್ದು, ಸ್ವಲ್ಪ ಕಣ್ಣು ತಪ್ಪಿದ್ದರೂ, ಕಂಟೈನರ್ ನಲ್ಲೇ 58 ಜನ ಕಾರ್ಮಿಕರು  ಪ್ರಾಣ ಕಳೆದುಕೊಳ್ಳುವ ಸಂಭವವಿತ್ತು.