ಸಮಗ್ರ ತೋಟಗಾರಿಕೆ ಕೃಷಿಯಲ್ಲಿ ಸಂತೃಪ್ತ ರೈತ ಮಹಿಳೆ
ಬಳ್ಳಾರಿ 05: ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ತಾನು ಉತ್ತಮ ಕೆಲಸ ಮಾಡಬಲ್ಲಳು ಎಂದು ಸಾಬಿತು ಪಡಿಸಿದ್ದಾಳೆ. ಇದಕ್ಕೆ ಕೃಷಿ ಕ್ಷೇತ್ರವು ಮತ್ತು ತೋಟಗಾರಿಕೆ ಕ್ಷೇತ್ರವು ಹೊರತಾಗಿಲ್ಲ. ಕೃಷಿಯಿಂದ ದೂರ ಸರಿದು ಇತರೆ ಉದ್ಯೋಗವನ್ನು ಹುಡುಕುತ್ತಾ ಪಟ್ಟಣಗಳನ್ನು ಸೇರುತ್ತಿರುವ ಯುವಕ ಯುವತಿಯರು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ತೋಟಗಾರಿಕೆ ಕೃಷಿಯನ್ನೇ ತಮ್ಮ ಜೀವನದ ಶೈಲಿ ಎಂದು ವಿದ್ಯಾವಂತ ಮಹಿಳೆಯರು ತೋಟಗಾರಿಕೆ ಕ್ಷೇತ್ರದಲ್ಲಿ ಕಂಡುಬರುವುದು ಅಪರೂಪ. ಇಂತಹವರ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮುಷ್ಠಗಟ್ಟೆ ಗ್ರಾಮದ ಯುವ ರೈತ ಮಹಿಳೆ ಬಿ.ಸುಜಾತ ಗಂಡ ನಾಗನಗೌಡ ಸೇರುತ್ತಾರೆ.
ತಮ್ಮ ಕ್ಷೇತ್ರದಲ್ಲಿನ ಮಣ್ಣು ಕಡಿಮೆ ಫಲವತ್ತತೆ ಹೊಂದಿದೆ ಎಂದು ಅರಿತ ಇವರು ಕೃಷಿ ಇಲಾಖೆಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿದರು. ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಣ್ಣಿನ ಫಲವತ್ತತೆ ಉತ್ತಮಗೊಳಿಸಲು ಮುಂದಾದರು.ಅದಕ್ಕಾಗಿ ಇವರು ತಮ್ಮ ಜಮೀನಿನಲ್ಲಿ ಬೇವಿನಹಿಂಡಿ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮ, ರೈಜೋಬಿಯಂ ಮತ್ತು ರಂಜಕ ಕರಗಿಸುವ ಆಣುಜೀವಿಗಳ ಜೊತೆಗೆ ವೆಸ್ಟ್ ಡಿಕಾಂಪೋಸರ್ ಬಳಸಿ ಕಾಂಪೋಸ್ಟ, ತಿಪ್ಪೆಗೊಬ್ಬರ ಹಾಗೂ ಎರೆಹುಳು ಗೊಬ್ಬರಗಳನ್ನು ತಯಾರಿಸಿಕೊಂಡು ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಂಡರು.ವಿವಿಧ ಸಾವಯವ ಮತ್ತು ಜೈವಿಕ ಗೊಬ್ಬರಗಳ ಉತ್ಪಾದನೆ ಮತ್ತು ಬಳಕೆಯಿಂದ ಉತ್ತಮ ಗೊಬ್ಬರವು ಸಿದ್ದವಾಗುವುದಲ್ಲದೇ ಬೆಳೆಗೆ ಅವಶ್ಯ ಸೂಕ್ಷಾಣು ಜೀವಿಗಳು ಲಭ್ಯವಾಗಿ ಹೆಚ್ಚಿನ ಇಳುವರಿ ಪಡೆಯಬಹುದು ಎಂಬುದು ಮನವರಿಕೆಯಾಯಿತು.ಬಿಸಿಲ ನಾಡಿನಲ್ಲಿ ನೀರಿನ ಮಹತ್ವ ಮತ್ತು ತಮ್ಮ ಜಮೀನಿಲ್ಲಿನ ನೀರಿನ ಅಭಾವ ಅರಿತ ಇವರು ಮೊದಲಿಗೆ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ನಿರ್ಮಿಸಿದರು. ನಂತರ ಹೆಚ್ಚಿನ ಇಳಿಜಾರು ಹೊಂದಿರುವ ಕ್ಷೇತ್ರದಲ್ಲಿ ಮಣ್ಣಿನ ಸವಕಳಿ ಕಡಿಮೆ ಮಾಡಲು ಇಳಿಜಾರಿಗೆ ಅಡ್ಡಲಾಗಿ ಕ್ಷೇತ್ರ ಬದುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಮಣ್ಣಿನ ಸಂರಕ್ಷಣೆ ಮತ್ತು ಮಳೆ ನೀರಿನ ಇಂಗುವಿಕೆ ಹೆಚ್ಚಾಗಿದೆ. ಇತರರಂತೆ ಸಾಂಪ್ರದಾಯಿಕ ಬೆಳೆಗಳನ್ನು ಅವಲಂಬಿಸದೇ “ಸಮಗ್ರ ತೋಟಗಾರಿಕೆ ಕೃಷಿ ಪದ್ದತಿ”ಯನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಂಡಿದ್ದಾರೆ.ತಮ್ಮ 7.25 ಎಕರೆ ಕ್ಷೇತ್ರದಲ್ಲಿ ವೈವಿಧ್ಯಮಯ ಬೆಳೆಗಳಾದ ಹಲಸು, ತೆಂಗು, ಪೇರಲ, ನಿಂಬೆ, ನುಗ್ಗೆ, ಬಾಳೆ, ಸೇಬು, ಹುಣುಸೆ, ತೇಗ, ಹೊನ್ನೆ, ಸಪೋಟ ಮತ್ತು ಓಷದ ಬೆಳೆಯಾಗಿ ನನ್ನಾರಿ ಇತ್ಯಾದಿ.. ಅಲ್ಲದೆ ಹತ್ತು ಹಲವು ತೋಟಗಾರಿಕೆ ಬೆಳೆಗಳನ್ನು ಇವರ ಕ್ಷೇತ್ರದಲ್ಲಿ ಕಾಣಬಹುದು.ಇವರು ನೂತನ ತಂತ್ರಜ್ಞಾನವನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಪಡೆದು ನೆರಳು ಮನೆಯಲ್ಲಿ ಹಣ್ಣುಗಳ ಶೇಖರಣೆ ಮತ್ತು ನನ್ನಾರಿ ಬೆಳೆಯ ಶೇಖರಣೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಸಂಪೂರ್ಣವಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಪದ್ದತಿಗೆ ಮೊರೆಹೋಗಿದ್ದಾರೆ. ಬೆಳೆಗಳಿಗೆ ಜೈವಿಕ ಮತ್ತು ಸಸ್ಯಜನ್ಯ, ಕೀಟನಾಶಕಗಳನ್ನು ಬಳಸುವ ಮೂಲಕ ಬೆಳೆಗೆ ತಗಲುವ ಕೀಟ-ರೋಗ ಬಾಧೆಯನ್ನು ಕಡಿಮೆ ಖರ್ಚಿನಲ್ಲಿ ನಿರ್ವಹಿಸುತ್ತಿರುವುದು ಉಲ್ಲೇಖನಾರ್ಹವಾಗಿದ್ದು.ಇವರು ಪ್ರತಿ ವರ್ಷ ನನ್ನಾರಿ ಬೆಳೆಯಿಂದ ಸರಾಸರಿ 9 ರಿಂದ 10 ಲಕ್ಷ ರೂ. ನಿವ್ವಳ ಲಾಭ ಪಡೆಯುತ್ತಿದ್ದಾರೆ. ಸಮಗ್ರ ಕೃಷಿ ಪದ್ದತಿಯಲ್ಲಿ ಪಶು ಸಂಪತ್ತನ್ನು ಸಮರ್ಕವಾಗಿ ಬಳಸಿಕೊಳ್ಳುತ್ತಿರುವುದು ಕಾಣಬಹುದಾಗಿದೆ. ಇವುಗಳಿಂದ ಸಾವಯವ ಪದ್ದತಿಯಲ್ಲಿ ಕಡಿಮೆ ಖರ್ಚಿನಲ್ಲಿ ಬೆಳೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆ ಎನ್ನುವುದು ಇವರ ಅಭಿಪ್ರಾಯ.ಇವರ ಈ ಉತ್ತಮ ಕೆಲಸಕ್ಕೆ ಇವರ ಪತಿ ಕೈ ಜೋಡಿಸಿ ಇವರು ಬೆಳೆದ ಹಣ್ಣು ಮತ್ತು ತರಾಕಾರಿಗಳನ್ನು ಮಾರುಕಟ್ಟೆಗೆ ಒದಗಿಸಲು ಮತ್ತು ಅದರಿಂದ ಬಂದ ಆದಾಯವನ್ನು ತಂದುಕೊಡುವುದಲ್ಲದೆ ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಇವರ ಈ ಸಾಧನೆಯನ್ನು ಗುರುತಿಸಿದ ಕೃಷಿ ಇಲಾಖೆಯ ಆತ್ಮ ಯೋಜನೆಯಲ್ಲಿ ಇವರಿಗೆ ಪ್ರಗತಿ ಪರ ಮಹಿಳೆಯನ್ನಾಗಿಸಿ 2024-25 ನೇ ಸಾಲಿನ ಜಿಲ್ಲಮಟ್ಟದ ಶ್ರೇಷ್ಠ ಕೃಷಿಕರ ಪಟ್ಟಿಯಲ್ಲಿ ಸೇರಿಸಲು ಅನುವು ಮಾಡಲಾಗಿದೆ.ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡ ಬಿ.ಸುಜಾತ ಗಂಡ ನಾಗನಗೌಡ ಇವರು ಇತರೆ ಯುವ ರೈತ ಮಹಿಳೆಯರಿಗೆ ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಇತರರು ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕರಣೀಯರಾಗಿದ್ದಾರೆ.