ಮಂಗಳೂರು, ಏ.5, ಕೊರೋನಾ ವೈರಸ್ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರ ಮೇಲೆ ಪೋಲಿಸ್ ಇಲಾಖೆ ಕೂಡಲೇ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿ ಬಂಧಿಸಬೇಕೆಂದು ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೋನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಜಾತಿ ಮತ ಭೇದವಿಲ್ಲದೆ ಇದನ್ನು ತಡೆಗಟ್ಟಲು ಎಲ್ಲರೂ ಕೂಡ ಮುಂಜಾಗ್ರತಾ ಕ್ರಮವಾಗಿ ಸರಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಈ ದೊಡ್ಡ ಮಾರಕ ವೈರಸ್ ನ ವಿರುದ್ಧವಾಗಿ ಎಲ್ಲರೂ ಒಟ್ಟಾಗಿ ನಿಲ್ಲುವಂತಹ ಸಂದರ್ಭದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕವಾದ ಬರಹ ಮತ್ತು ಹೇಳಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಾಣಿಯೂರಿನ ಕುಸುಮಾಧರ್ ಎಂಬವರು " ಕೊರೋನಾಗಿಂತ ಕುರಾನ್ ಭಾರತಕ್ಕೆ ಮಾರಕ ಆಗ್ತಾ ಇದೆ" ಹಾಗೂ ಸುಬ್ರಹ್ಮಣ್ಯ ಮತ್ತು ಸುಳ್ಯ ಪೋಲಿಸ್ ಠಾಣಾ ವ್ಯಾಪ್ತಿಯ ಓಂಪ್ರಕಾಶ್ ಸುಳ್ಯ ಮತ್ತು ಸುಚಿನ್ ಗೌಡ ಸುಚಿ ಎಂಬ ವ್ಯಕ್ತಿಗಳಿಬ್ಬರು ಫೇಸ್ ಬುಕ್ ನಲ್ಲಿ ಪವಿತ್ರ ಗ್ರಂಥ ಕುರ್ ಆನ್ ಮತ್ತು ಮುಸ್ಲಿಮರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ಪ್ರಚೋದನಕಾರಿ ಸಂದೇಶವನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿ ಸಮಾಜದಲ್ಲಿ ಕೋಮು ಪ್ರಚೋದನೆಯನ್ನು ನಡೆಸಿದ್ದಾರೆ. ಈ ಮೂವರ ವಿರುದ್ಧ ಮತ್ತು ಈ ರೀತಿಯ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರ ಮೇಲೆ ಪೋಲಿಸ್ ಇಲಾಖೆ ಕೂಡಲೇ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿ ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.