ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದ ಕವಿ ಸರ್ವಜ್ಞ
ಕಂಪ್ಲಿ 20: ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದ ಕವಿ ಸರ್ವಜ್ಞನ ವಚನಗಳು ಇಂದಿನ ಮಕ್ಕಳು, ಯುವಸಮುದಾಯ ಹಾಗೂ ಸಮಾಜಕ್ಕೆ ದಾರೀದೀಪವಾಗಿವೆ ಎಂದು ಗ್ರೇಡ್-2 ತಹಶೀಲ್ದಾರ್ ಷಣ್ಮುಕ ಹೇಳಿದರು. ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞನ ಜಯಂತಿಯಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ನಂತರ ಮಾತನಾಡಿ, ಕವಿ ಸರ್ವಜ್ಞನ ವಚನಗಳು ಸಾಮಾಜಿಕ ಸುಧಾರಣೆ, ಜಾತ್ಯತೀತ, ಮಾನವೀಯ ಮೌಲ್ಯ ಹಾಗೂ ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವಂತಹ ವಚನಗಳಾಗಿವೆ. ಸರಳ, ಸಜ್ಜನಿಕೆ ಹಾಗೂ ಆದರ್ಶ ಗುಣಗಳನ್ನು ಹೊಂದಿದ್ದ ಸರ್ವಜ್ಞ ಸುಂದರ ಹಾಗೂ ಆದರ್ಶ ಸಮಾಜ ನಿರ್ಮಿಸಲು ನಿರಂತರವಾಗಿ ಶ್ರಮಿಸಿದ್ದಾರೆ ಎಂದರು. ನಂತರ ಶ್ರೀಶಾಲಿವಾಹನ ಕುಂಬಾರ ಸಂಘದ ಖಜಾಂಚಿ ಕೆ.ರಾಜ ಮಾತನಾಡಿ, ಸರ್ವ ಕಾಲಕ್ಕೂ ತ್ರಿಪದಿ ಸರ್ವಜ್ಞನ ವಚನಗಳು ಪ್ರಸ್ತುತ. ಅವರ ಆದರ್ಶ ಗುಣಗಳು, ಸರ್ವಜ್ಞನ ವಚನಗಳು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು. ಕುಂಬಾರ ಸಮಾಜದವರಿಗೆ ಬಹಳ ಅನುಕೂಲವಾಗಲಿದೆ. ಕುಂಬಾರ ಸಮುದಾಯ ಶೈಕ್ಷಣಿಕ, ರಾಜಕೀಯ, ಆರ್ಥಿಕ ತೀರಾ ಹಿಂದುಳಿದ ಸಮಾಜವಾಗಿದೆ. ಸರ್ಕಾರ ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಬೇಕು. ಮತ್ತು ಪೋಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಶಿರಸ್ತೇದಾರ ರಮೇಶ, ಪ್ರಥಮ ದರ್ಜೆ ಸಹಾಯಕ ಮಾಲತೇಶ ದೇಶಪಾಂಡೆ, ಸಿಬ್ಬಂದಿ ಸುರೇಶ, ಶ್ರೀಶಾಲಿವಾಹನ ಕುಂಬಾರ ಸಂಘದ ಪದಾಧಿಕಾರಿಗಳಾದ ಕೆ.ನಾಗಲಿಂಗ, ಕೆ.ವಿರೇಶ, ಸೋಮಪ್ಪ ಇದ್ದರು.