ಬೆಳಗಾವಿ 24: ಶಿಸ್ತು, ವೈಜ್ಞಾನಿಕತೆ ಮತ್ತು ಯೋಜನಾಬದ್ಧತೆಗಳು ಯಾವುದೇ ಸಂಸ್ಥೆಯ ನಿರ್ಮಾಣದಲ್ಲಿ ಪ್ರಮುಖಪಾತ್ರವನ್ನು ವಹಿಸುತ್ತವೆ. ದಕ್ಷತೆ, ವೈಜ್ಞಾನಿಕ ದಾಖಲೀಕರಣ ಹಾಗೂ ಯೋಜನಾಬದ್ಧತೆಗಳಿಂದ ಸಂಸ್ಥೆಯನ್ನು ಉತ್ಕೃಷ್ಟತೆಯತ್ತ ಕೊಂಡಯ್ಯಬಹುದು ಎಂದು ಬೆಂಗಳೂರಿನ ನ್ಯಾಕ್ ಸಂಸ್ಥೆಯ ಸಲಹೆಗಾರರಾದ ಡಾ. ಕೆ. ರಮಾ ಹೇಳಿದರು. ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಣಗದಲ್ಲಿ ಶುಕ್ರವಾರ 24 ರಂದು ಆಂತರಿಕ ಗುಣಮಟ್ಟ ಭರವಸೆ ಕೋಶವು ನ್ಯಾಕ್ ಸಿದ್ಧತೆಗಾಗಿ ಆಯೋಜಿಸಿದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ,
ನಿಯತಕಾಲಿಕವಾಗಿ ದಾಖಲೀಕರಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು, ವೈಜ್ಞಾನಿಕವಾಗಿ ದಾಖಲೆಗಳನ್ನು ಕ್ರೋಢಿಕರಿಸುವುದು ಹಾಗೂ ಯೋಜನೆಗಳನ್ನು ರೂಪಿಸಿಕೊಂಡು ಬದ್ಧತೆಯಿಂದ ಅವುಗಳನ್ನು ಅನುಷ್ಠಾನಗೊಳಿಸುವುದು ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿದ್ದರೆ ನ್ಯಾಕ್ ಮನ್ನಣೆಗೆ ಸಿದ್ಧವಾಗಿದೆ ಎಂದು ಪರಿಭಾವಿಸಿಕೊಳ್ಳಬಹುದಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ ಮಾತನಾಡಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ನ್ಯಾಕ್ನ ಉನ್ನತ ಶ್ರೇಣಿಯ ಮನ್ನಣೆ ಪಡೆದುಕೊಳ್ಳುವಷ್ಟು ಸಾಮಥ್ರ್ಯವನ್ನು ಹೊಂದಿದೆ ಶೀಘ್ರದಲ್ಲೆ ನ್ಯಾಕ್ ಪ್ರಕ್ರಿಯೆಗೆ ವಿಶ್ವವಿದ್ಯಾಲಯವನ್ನು ಅಣಿಗೊಳಿಸುತ್ತಿದ್ದೇವೆ. ಈಗಾಗಲೇ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪರಿಶೋಧನೆಯಲ್ಲಿ ಉನ್ನತ ಮಟ್ಟದ ಶ್ರೇಣಿಯನ್ನು ವಿಶ್ವವಿದ್ಯಾಲಯವು ಪಡೆದುಕೊಂಡಿರುವುದು ಸಂತೋಷದ ಸಂಗತಿಯೆಂದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಪ್ರೊ. ಶಿವಾನಂದ ಗೊರನಾಳೆ ಪ್ರಸ್ತಾವಿಕವಾಗಿ ಮಾತನಾಡಿ, ನ್ಯಾಕ್ ಮನ್ನಣೆಗೆ ಬೇಕಾದ ಎಲ್ಲ ಸಿದ್ಧತೆಯು ನಮ್ಮ ಸ್ನಾತಕೋತ್ತರ ಹಾಗೂ ಆಡಳಿತಾತ್ಮಕ ವಿಭಾಗಗಳು ಹೊಂದಿವೆ, ಅವುಗಳನ್ನು ಈಗ ಕ್ರೋಢಿಕರಿಸುವ ಕೆಲಸ ನಡೆಯುತ್ತಿದೆ. ಈ ಕಾರಣಕ್ಕಾಗಿ ಎಲ್ಲ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರನ್ನು ಹಾಗೂ ಪ್ರಾಧ್ಯಾಪಕರನ್ನು ಅಭಿನಂದಿಸಬೇಕಾಗಿದೆ ಎಂದರು.
ಎರಡನೇಯ ಅಧಿವೇಶನದಲ್ಲಿ ನ್ಯಾಕ್ ಸಂಸ್ಥೆಯ ಸಹಾಯಕ ಸಲಹೆಗಾರರಾದ ಡಾ.ಡಿ.ಕೆ. ಕಾಂಬಳೆ ಅವರು ಸ್ವಯಂ ಅಧ್ಯಯನ ವರದಿಯನ್ನು ಹೇಗೆ ಸಿದ್ಧಪಡಿಸಬೇಕು ಹಾಗೂ ಅದನ್ನು ಸಂಸ್ಥೆಗೆ ಆನ್ಲೈನ್ ಮೂಲಕ ಹೇಗೆ ಕಳುಹಿಸಿಕೊಡಬೇಕೆಂಬ ವಿವರಗಳ ಬಗೆಗೆ ತರಬೇತಿಯನ್ನು ನೀಡಿದರು.ಡಾ. ವಿಷ್ಣುಕಾಂತ ಚಟಪಲ್ಲಿ ಅವರು ಹೊಸ ವ್ಯವಸ್ಥೆಯಲ್ಲಿ ಕಾಗದ ಪತ್ರಗಳನ್ನು ಹೇಗೆ ಸಿದ್ಧಪಡಿಸಬೇಕು ಅವುಗಳನ್ನು ಹೇಗೆ ವ್ಯವಸ್ಥಿತವಾಗಿ ಜೋಡಿಸಬೇಕು ಎಂಬ ವಿಷಯಗಳ ಬಗ್ಗೆ ಚರ್ಚಿಸಿದರು. ಮೊದಲನೆಯ ಅಧಿವೇಶನಕ್ಕೆ ಪ್ರೊ. ಎಸ್.ಎಂ.ಹುರಕಡ್ಲಿ ಅವರು, ಎರಡನೆಯ ಅಧಿವೇಶನಕ್ಕೆ ಪ್ರೊ. ಕೆ.ಬಿ.ಚಂದ್ರಿಕಾ ಅವರು ಮೂರನೆಯ ಅಧಿವೇಶನಕ್ಕೆ ಪ್ರೊ. ಹೆಚ್.ವಾಯ್.ಕಾಂಬಳೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಅವರು ಸಮಾರೋಪ ಭಾಷಣವನ್ನು ಮಾಡಿದರು. ಡಾ.ಮಲ್ಲಮ್ಮ ರೆಡ್ಡಿ ಅತಿಥಿಗಳನ್ನು ಸ್ವಾಗತಿಸಿದರು, ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅಧ್ಯಯನ ವಿಭಾಗಗಳ ಮುಖ್ಯಸ್ಥರುಗಳು, ಡೀನರುಗಳು ಬೋಧಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗೌರಮ್ಮ ಪಾಟೀಲ ನಿರೂಪಿಸಿದರು. ವಿದ್ಯಾಸಾಗರ ಮೈಸೂರಮಠ ವಂದಿಸಿದರು.