ವಿಜಯನಗರ ಗತವೈಭವ ಮರಳಿಸಿದ ಸಾಂಸ್ಕೃತಿಕ ಸಂಜೆ

A cultural evening bringing back the glory of Vijayanagara

ವಿಜಯನಗರ(ಹೊಸಪೇಟೆ) 02: ಕಲೆಯ ತವರೂರಾದ ಹಂಪಿಯಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತ ವೈಭವದ ಸೊಬಗು ಎದುರು ಬಸವಣ್ಣ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮತ್ತೆ ಮರುಕಳಿಸಿತು.  

ಹಂಪಿ ಉತ್ಸವದ ಎರಡನೇ ದಿನ ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರು ಸಂಸ್ಕೃತಿಯ ಗಂಧರ್ವಲೋಕವನ್ನೇ ಧರೆಗಿಳಿಸಿದರು.  

ಆರಂಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದ ಗಾಯತ್ರಿ ಮತ್ತು ಅವರ ತಂಡದಿಂದ ಸಮೂಹ ನೃತ್ಯದ ಮೂಲಕ ಹಂಪಿಯ ಸೊಬಗಿನ ಕಲೆಯನ್ನು ಅನಾವರಣಗೊಳಿಸಿದರು.  

ಹಾಸನ ಜಿಲ್ಲೆಯ ಬೇಲೂರಿನ ನರಸಿಂಹಸ್ವಾಮಿ ಅವರ ಸಂಗಡಿಗರ ಸಾಕ್ಯೋಪೋನ್ ವಾದನವು ಕೇಳುಗರ ಕಿವಿ ಇಂಪಾಗಿಸಿತು. ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ವಿದೇಶಿಗರು ಸಹ ತಲೆದೂಗಿಸಿದ್ದು ಕಂಡುಬಂತು.  

ಬಳ್ಳಾರಿಯ ಫೋರ್ಡಿ ಡ್ಯಾನ್ಸ್‌ ಅಕಾಡೆಮಿ ವತಿಯಿಂದ  

ನಾಡಿನ ಕಾವೇರಿ ನದಿಯ ಮಹತ್ವ ಸಾರುವ ‘ಕನ್ನಡ ನಾಡಿನ ಜೀವನದಿ-ಕಾವೇರಿ’, ಗಲ್ಲು ಗಲ್ಲೇನೂತ ಗೆಜ್ಜೆ ಗಲ್ಲುಸಾಜೆನುತ, ಕೇಳಿಸದೇ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ- ಹಂಪಿಯ ಗುಡಿ ಎನ್ನುವ ಸಂಗೀತಕ್ಕೆ ಪ್ರದರ್ಶಿಸಿದ ನೃತ್ಯವು ನೋಡುಗರ ಮನಸೂರೆಗೊಂಡಿತು.  

ಬಳ್ಳಾರಿಯ ಬಿ.ವೀಣಾಕುಮಾರಿ ತಂಡವು ರಂಗ ಗೀತೆಗಳನ್ನು ಹಾಡಿದರು. ಕೊಪ್ಪಳದ ಗಂಗಾವತಿಯ ವಿದ್ಯಾಶ್ರೀ ಸಾಲಿಮಠ ಅವರು ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಬೀದರ್ ನ ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರ ಮತ್ತು ಬೆಂಗಳೂರಿನ ಕನ್ನಡ ಕಲಾಲಯ ಟ್ರಸ್ಟ್‌ ತಂಡ ವತಿಯಿಂದ ನೃತ್ಯ ರೂಪಕ ಪ್ರದರ್ಶಿಸಿದರು.   

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ ಅವರು ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ವೀರ ಸಂಗಯ್ಯ ಅವರು ಹಂಪಿ ಉತ್ಸವದ ಎದುರು ಬಸವಣ್ಣ ವೇದಿಕೆಯ ರಾಯಭಾರಿಯಾಗಿದ್ದರು.