ಪಾಕ್ ಸೈನಿಕರಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಜಮ್ಮು, ನ.5:    ಪಾಕಿಸ್ತಾನ ಸೈನಿಕರು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ದಾಳಿ ನಡೆಸಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದಾರೆ. ಬೆಳಗ್ಗೆ 7.40ರ ಸುಮಾರಿಗೆ ಪಾಕಿಸ್ತಾನ ಸೈನಿಕರು ಪೂಂಛ್ ಜಿಲ್ಲೆಯ ಕಿರ್ನಿ ವಲಯದ ಎಲ್ಒಸಿಯುದ್ಧಕ್ಕೂ ಕದನ ವಿರಾಮ ಉಲ್ಲಂಘಿಸಿ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ವಕ್ತಾರರೊಬ್ಬರು ತಿಳಿಸಿದ್ದಾರೆ. ಭಾರತೀಯ ಸೇನೆಯು ಸೂಕ್ತವಾಗಿ ಪ್ರತಿ ದಾಳಿ ನಡೆಸಿದೆ, ಆದರೆ ಗುಂಡಿನ ವಿನಿಮಯವು ಸುಮಾರು 8 ಗಂಟೆಗೆ ನಿಂತಿದೆ ಎಂದು ಅವರು ಹೇಳಿದರು. ನವೆಂಬರ್ 2 ರಂದು, ಪಾಕಿಸ್ತಾನ ಸೇನೆಯು ಪೂಂಛ್ನಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಗುಂಡು ಹಾರಿಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿತ್ತು.