ನಡು ರಸ್ತೆಯಲ್ಲೇ ನಟಿಗೆ ಹಲ್ಲೆ ನಡೆಸಿದ ಕಾರು ಚಾಲಕ

ಮಂಗಳೂರು, ಫೆ.12,ಚಿತ್ರ ನಟಿಯೊಬ್ಬರಿಗೆ ವ್ಯಕ್ತಿಯೊಬ್ಬ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪೆರುವಾಯಿ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಇದೀಗ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫೆಬ್ರವರಿ 10ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಕನ್ನಡ, ತುಳು ಸಿನೆಮಾ ನಟಿಯಾಗಿರುವ ಶೋಭಿತಾ ಸಂಚರಿಸುತ್ತಿದ್ದ ಕಾರಿಗೆ ದಾರಿ ಬಿಟ್ಟು ಕೊಡುವ ವಿಚಾರವಾಗಿ ಈ ಘಟನೆ ನಡೆದಿದೆ. ದಾರಿ ಬಿಟ್ಟು ಕೊಡುವ ವಿಷಯದಲ್ಲಿ ಇನ್ನೊಂದು ಕಾರಿನವನ ಜೊತೆ ಶೋಭಿತಾ ತಗಾದೆ ತೆಗೆದಿದ್ದಾರೆ. ಇದೇ ವೇಳೆ ಎರಡು ಕಾರಿನವರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ನಡು ರಸ್ತೆಯಲ್ಲೇ ಹೊಯ್ ಕೈ ಹಂತಕ್ಕೆ ತಲುಪಿದೆ. ಶೋಭಿತಾ ಅವರ ಮೇಲೆ ಇನ್ನೊಂದು ಕಾರಿನಲ್ಲಿದ್ದವರು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಶೋಭಿತಾ ಕೂಡ ಅವರಿಗೆ ಹಲ್ಲೆ ನಡೆಸುವ ದೃಶ್ಯ ವೀಡಿಯೋದಲ್ಲಿದೆ. ಆದರೆ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ,.