ಒಡಿಸ್ಸಾದಲ್ಲಿ ಸೇತುವೆಯಿಂದ ಉರುಳಿದ ಬಸ್‌; 7 ಸಾವು, 40 ಮಂದಿಗೆ ಗಾಯ

ಭುವನೇಶ್ವರ, ಜ.29,ಒಡಿಶಾದ ಗಂಜಾಂ ಜಿಲ್ಲೆಯ ಪಲುಖೇಲಾದಲ್ಲಿನ ತಪ್ತಪಾನಿ ಘಾಟಿ ಬಳಿಯ ಸೇತುವೆಯಿಂದ ಬಸ್ಸೊಂದು ಉರುಳಿಬಿದ್ದ ಪರಿಣಾಮ ಏಳು ಮಂದಿ ಪ್ರಯಾಣಿಕರು ಸಾವನ್ನಪ್ಪಿ, 40  ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.ಬೆಳಗ್ಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ರಾಯಗಡದಿಂದ ಬೆಹ್ರುಂಪುರಕ್ಕೆ ಹೋಗುತ್ತಿದ್ದ ಬಸ್‌ನ ಬ್ರೇಕ್ ವೈಫಲ್ಯದಿಂದಾಗಿ ಅದು ಸೇತುವೆಯಿಂದ ಕೆಳಕ್ಕೆ ಉರುಳಿ ಈ ದುರಂತ ಸಂಭವಿಸಿದೆ.ಮೋಹನಾ, ಸಂಕೇಮುಂಡಿ, ದಿಗಾಪಹಂಡಿ ಮತ್ತು ಬೆರ್ಹಾಂಪುರದ ಅಗ್ನಿಶಾಮಕ  ದಳದ ಕನಿಷ್ಠ 50 ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, 

ರಕ್ಷಣಾ  ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಮುಖ್ಯ ಅಗ್ನಿಶಾಮಕ  ಅಧಿಕಾರಿ ಸುಕಾಂತ್ ಸೇಥಿ ತಿಳಿಸಿದ್ದಾರೆ.ಬಸ್‌ ಬಿದ್ದ ಸ್ಥಳದಲ್ಲಿ ಹೆಚ್ಚಿನ ನೀರು ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಸೇಥಿ ಹೇಳಿದರು.  ತಲೆಕೆಳಗಾಗಿ ಬಿದ್ದಿರುವ ಬಸ್‌ನಿಂದ ಪ್ರಯಾಣಿಕರನ್ನು ರಕ್ಷಿಸಲು ಎಲ್ಲಾ ಆಧುನಿಕ ಉಪಕರಣಗಳು, ಗ್ಯಾಸ್ ಕಟ್ಟರ್‌ಗಳು  ಬಳಸಲಾಗುತ್ತದೆ ಎಂದು ಅವರು ಹೇಳಿದರು.ಗಾಯಗೊಂಡ ಎಲ್ಲ  ಪ್ರಯಾಣಿಕರನ್ನು ಚಿಕಿತ್ಸೆಗಾಗಿ ದಿಗಪಗಂಡಿ ಆಸ್ಪತ್ರೆ ಮತ್ತು ಬೆರ್ಹಾಂಪುರದ ಎಂ ಕೆ ಸಿ  ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಕೆಲವು  ಪ್ರಯಾಣಿಕರು ಇನ್ನೂ ಬಸ್ಸಿನೊಳಗೆ ಸಿಲುಕಿಕೊಂಡಿದ್ದಾರೆ ಮತ್ತು ಗ್ಯಾಸ್ ಕಟ್ಟರ್ ಬಳಸಿ  ಅವರನ್ನು ಬಸ್‌ನಿಂದ ರಕ್ಷಿಸಲು ಎಲ್ಲಾ ಪ್ರಯತ್ನಗಳು  ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಹಿರಿಯ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.