ಕುವೈತ್ ನಿಂದ ಬೆಂಗಳೂರಿಗೆ ಬಂದಿಳಿದ 80 ಅನಿವಾಸಿ ಭಾರತೀಯರು

ಬೆಂಗಳೂರು, ಜೂ 3, ಕೋವಿಡ್-19 ಲಾಕ್ ಡೌನ್ ನಿಂದಾಗಿ ಕುವೈತ್ ನಲ್ಲಿ ಸಿಲುಕಿದ್ದ 80 ಮಂದಿ ಅನಿವಾಸಿ ಭಾರತೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ.ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 25 ನೇ ಏರ್ ಇಂಡಿಯಾ ವಿಮಾನದಲ್ಲಿ ಇವರು ಆಗಮಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ  ತಿಳಿಸಿದ್ದಾರೆ.ಬಂದ 80 ಮಂದಿ ಪ್ರಯಾಣಿಕರಲ್ಲಿ 64 ಪುರುಷರು ಮತ್ತು 16 ಮಹಿಳೆಯರಿದ್ದಾರೆ. ನಿಲ್ದಾಣದಲ್ಲಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿ 80 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೊನಾ ವೈರಾಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಇವರೆಲ್ಲರನ್ನೂ 7 ದಿನಗಳ ಕಾಲ ಹಜ್ ಭವನದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಿಕೊಡಲಾಗಿದೆ ಎಂದರು.ರೋಗ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳನ್ನು ಬೆಂಗಳೂರಿನ ನಿಗದಿತ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗುವುದು ಹಾಗೂ ರೋಗ ಲಕ್ಷಣ ರಹಿತ ವ್ಯಕ್ತಿಗಳು 7 ದಿನಗಳ ಗೃಹ ಬಂಧನಕ್ಕೆ ಒಳಗಾಗಲಿದ್ದಾರೆ ಎಂದರು.