ವಾಷಿಂಗ್ಟನ್, ಮಾರ್ಚ್ 7, ಕೊವಿದ್-19(ಕೊರೊನ ವೈರಸ್) ಹರಡುವುದನ್ನು ತಡೆಯಲು ಮತ್ತು ಸೋಂಕಿನ ಚಿಕಿತ್ಸೆಗಳಿಗಾಗಿ ಅಮೆರಿಕ ಸಂಸತ್ ಈ ವಾರ ಅಂಗೀಕರಿಸಿದ 8.3 ಶತಕೋಟಿ ಡಾಲರ್ ಗಳ ತುರ್ತು ನಿಧಿ ಪ್ಯಾಕೇಜ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.ಕೊವಿದ್-19 ಸೋಂಕು ನಿಯಂತ್ರಣ ಮತ್ತು ತಡೆಗೆ ಸರ್ಕಾರದಿಂದ ತುರ್ತು ಬೆಂಬಲ ಅಗತ್ಯವಿರುವುದರಿಂದ ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತಿದೆ. ಅಮೆರಿಕ ಸಂಸತ್ ಗುರುವಾರ ನಿಧಿ ಪ್ಯಾಕೇಜ್ ಬಿಡುಗಡೆಗೆ ಸರ್ವಾನುಮತದಿಂದ ಅಂಗೀಕರಿಸಿತ್ತು.. ಸಂಸತ್ ಅಂಗೀಕರಿಸಿದ ಮಸೂದೆಯು ವೈರಸ್ ಪರೀಕ್ಷೆಗೆ ಧನಸಹಾಯ ಹೆಚ್ಚಿಸುವುದಲ್ಲದೆ, ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತದೆ. ಅಲ್ಲದೆ, ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಾಗುವಂತೆ ಅನುವು ಮಾಡಿಕೊಡಲಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಸ್ ಹರಡುವಿಕೆ ಎದುರಿಸಲು ಸುಮಾರು 7.8 ಶತಕೋಟಿ ಡಾಲರ್ ಗಳಷ್ಟು ಹಣವನ್ನು ಈ ಯೋಜನೆಯು ಒಳಗೊಂಡಿದೆ. ಮತ್ತು ಮೆಡಿಕೇರ್ ಫಲಾನುಭವಿಗಳು ಟೆಲಿಹೆಲ್ತ್ ಕಾರ್ಯಕ್ರಮದ ಪ್ರಯೋಜನ ಪಡೆಯಲು 500 ದಶಲಕ್ಷ ಡಾಲರ್ ಗಳನ್ನು ಈ ಯೋಜನೆ ಮೂಲಕ ಒದಗಿಸಲಾಗುವುದು. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುವ ಮಾಹಿತಿ ನಿಗಾ ಉಪಕರಣದ ಪ್ರಕಾರ, ಅಮೆರಿಕನ್ ಜನರಲ್ಲಿ ವೈರಸ್ ಹರಡುವ ಭೀತಿ ಹೆಚ್ಚುತ್ತಿದೆ. ದೇಶದಲ್ಲಿ ಇದುವರೆಗೆ 300 ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, 10 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.