ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಘೋಷಣೆ

ನವದೆಹಲಿ, ಸೆ.18   ಸತತ ಆರನೇ ವರ್ಷವೂ ಮೋದಿ ಸರ್ಕಾರ 11,52,000 ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಅನ್ನು ಘೋಷಿಸಿದೆ.    

 ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಕ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 2,024 ಕೋಟಿ ರೂ. ವ್ಯಯವಾಗಲಿದೆ. 

 ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ರೈಲ್ವೆ ಇಲಾಖೆಯ ಉತ್ಪಾದಕತೆಯಲ್ಲಿ ಲಾಭ ತಂದುಕೊಟ್ಟ ಕಾರ್ಮಿಕರಿಗೆ ಪ್ರತಿಫಲ ನೀಡುವುದು ನಮ್ಮ ನಿರ್ಧಾರವಾಗಿದೆ ಎಂದು ಸುದ್ದಿಗಾರರಿಗೆ ಹೇಳಿದರು.    

'ದೇಶದ ಜೀವಸೆಲೆ' ಆಗಿರುವ ಸಂಸ್ಥೆಯನ್ನು ನಡೆಸುವಲ್ಲಿ ರೈಲ್ವೆ ನೌಕರರು ನೀಡಿದ ಕೊಡುಗೆಗಾಗಿ ಕಳೆದ ಆರು ವರ್ಷಗಳಿಂದ ಸರ್ಕಾರ ಸತತವಾಗಿ ಬೋನಸ್ ನೀಡುತ್ತಾ ಬಂದಿದೆ ಎಂದು ಅವರು ಹೇಳಿದರು.