ಏಳು ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ನಂತರ ಹೋಂ ಕ್ವಾರೆಂಟೈನ್ ಗೆ ಅವಕಾಶ: ಆರೋಗ್ಯ ಇಲಾಖೆ

ಬೆಂಗಳೂರು, ಮೇ 28,ಕೊರೋನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಸಾಂಸ್ಥಿಕ ಕ್ವಾರೆಂಟೈನ್ ಗೆ ಒಳಪಡಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಕ್ವಾರೆಂಟೈನ್ ಅವಧಿಯನ್ನು 7 ದಿನಕ್ಕೆ ಇಳಿಕೆ ಮಾಡಲಾಗಿದೆ. ಸೋಂಕು ನಿಯಂತ್ರಣ ಭಾಗವಾಗಿ ಏಳು ದಿನಗಳ ಸಾಂಸ್ಥಿಕ ಕ್ವಾರೆಂಟೇನ್ ಗೆ ಒಳಗಾದ ನಂತರ ಸೋಂಕಿನ ಲಕ್ಷಣಗಳು ಕಂಡು ಬರದೇ ಇದ್ದಲ್ಲಿ ಅಂತಹ ವ್ಯಕ್ತಿಗಳನ್ನು ಹೋಂ ಕ್ವಾರೇಂಟೇನ್ ಗೆ ಒಳಪಡಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಲಕ್ಷಾಂತರ ಮಂದಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಆಗಮಿಸುತ್ತಿದ್ದು, ಸಾಂಸ್ಥಿಕ ಕ್ವಾರೆಂಟೈನ್ ಗೆ ಒಳಪಡಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹ ತನ್ನ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡಿದ್ದು, ಸಾಂಸ್ಥಿಕ  ಕ್ವಾರೆಂಟೈನ್ ಅವಧಿಯನ್ನು ಶೇ 50 ರಷ್ಟು ಕಡಿಮೆ ಮಾಡಿದೆ. ಈ ಕುರಿತು ಅಧಿಸೂಚನೆ ಜಾರಿಯಾಗಿದ್ದು, ಒಂದು ವಾರದ ನಂತರ ಸೋಂಕಿನ ಲಕ್ಷಣಗಳಿಲ್ಲದಿದ್ದ ಪಕ್ಷದಲ್ಲಿ ಅಂತಹ ವ್ಯಕ್ತಿಗಳನ್ನು ಆರ್.ಟಿ-ಪಿಸಿಆರ್ ಕೋವಿಡ್ ಪರೀಕ್ಷೆಮಾಡದೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಹೋಂ ಕ್ವಾರೆಂಟೈನ್ ಗೆ ಕಳುಹಿಸಬಹುದು ಎಂದು ಹೇಳಿದೆ. ಇನ್ನು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ  ಮದುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಶ್ವಾಸಕೋಶ ಸಮಸ್ಯೆಗಳಿದ್ದಲ್ಲಿ ಅಂತಹವರನ್ನು ಸಹ ಹೋಂ ಕ್ವಾರೆಂಟೈನ್ ಗೆ ಒಳಪಡಿಸಬಹುದು. ಹೋಂ ಕ್ವಾರೆಂಟೈನ್ ಗೆ ಒಳಪಡುವವರು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು., ಜತೆಗೆ ಕೈಗೆ ಮುದ್ರೆ ಒತ್ತಿ ಕಳುಹಿಸಬೇಕು. ಕ್ವಾರೆಂಟೈನ್ ವಾಚ್ ಆ್ಯಪ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಸಹ ಕಡ್ಡಾಯವಾಗಿದೆ ಎಂದು ಹೇಳಿದೆ.