ಬೆಂಗಳೂರು, ಏ.1, ಪ್ರಾರ್ಥನೆಯಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಮಲೇಶಿಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದ ಮಾಹಿತಿ ಲಭಿಸಿದೆ. ಇದರಲ್ಲಿ 12 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ತಮ್ಮ ದೇಶಕ್ಕೆ ಹಿಂತಿರುಗದೆ ಇಲ್ಲೇ ಉಳಿದಿರುವವರನ್ನು ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೆಹಲಿಯ ಬಾಂಗ್ಲಾವಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿದ ಕರ್ನಾಟಕ ಮೂಲದ 300 ಜನರು ಭಾಗವಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇದರಲ್ಲಿ 40 ಜನರನ್ನು ಪತ್ತೆ ಹಚ್ಚಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ಇದರಲ್ಲಿ 12 ಜನರ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಎಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಕರ್ನಾಟಕದಲ್ಲಿ ನಿನ್ನೆವರೆಗೆ 101 ಕೋವಿಡ್-19 ಪ್ರಕರಣಗಳು ಖಚಿತಗೊಂಡಿದೆ. 8 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಹರ್ಷದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.