ಮಂಡ್ಯದಲ್ಲಿ ಪತ್ತೆಯಾದ 62 ಸೋಂಕಿತರು ಮುಂಬೈನಿಂದ ಆಗಮಿಸಿದವರು; ಜಿಲ್ಲಾಧಿಕಾರಿ ವೆಂಕಟೇಶ್

ಮಂಡ್ಯ/ಬೆಂಗಳೂರು, ಮೇ 19,ಮಂಡ್ಯ ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಎಲ್ಲಾ 62 ಕೊರೋನಾ ಸೋಂಕಿತ ವ್ಯಕ್ತಿಗಳು ಮುಂಬೈನಿಂದ ಆಗಮಿಸಿದವರು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದರು. ಕೋವಿಡ್-19 ಕುರಿತ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನಿಡಿದ ಅವರು, ಮುಂಬೈನ ಸಂತ ಕ್ರೂಸ್, ಅಂಧೇರಿ, ನೆಹರು ನಗರ, ವಿಲೇ ಪಾರ್ಲೆ ಮತ್ತು ಮುಂಬೈ ಪಶ್ಚಿಮದಲ್ಲಿ ಬಹಳ ವರ್ಷಗಳಿಂದ ಬ್ಯಾಂಕ್, ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದವರು, ಗೃಹಿಣಿಯರು ಮೇ 15 ಹಾಗೂ 16ರಂದು ಮಂಡ್ಯಕ್ಕೆ ಮರಳಿದ್ದರು. ಅವರ ಗಂಟಲ ದ್ರವಗಳನ್ನು ಸಂಗ್ರಹಿಸಿ ತಪಾಸಣೆ ಕಳುಹಿಸಲಾಗಿತ್ತು. ಪ್ರತಿಯೊಬ್ಬರನ್ನೂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಎಂದರು.
62 ಸೋಂಕಿತ ಪ್ರಕರಣದಲ್ಲಿ 41 ಪ್ರಕರಣಗಳು ಕೆ.ಆರ್.ಪೇಟೆ, 21 ಪ್ರಕರಣಗಳು ನಾಗಮಂಗಲದಲ್ಲಿ ವರದಿಯಾಗಿವೆ. ಇವರಲ್ಲಿ 26 ಪುರುಷರು, 23 ಮಹಿಳೆಯರು, 7 ಗಂಡು, 6 ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ 1 ವರ್ಷದ ಮಗುವಿನಿಂದ 65 ವರ್ಷದ ವೃದ್ಧವರೆಗೆ ಎಲ್ಲಾ ವಯೋಮಾನದವರೂ ಇದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರ ಚಿಕಿತ್ಸೆಗಾಗಿ 350 ಹಾಸಿಗೆಗಳನ್ನು ಮೀಸಲಿರಿಸಲಾಗಿದ್ದು, ಅದನ್ನು ಇನ್ನಷ್ಟು ಹೆಚ್ಚಿಸಲಾಗುವುದು.ತಾಲೂಕು ಕೇಂದ್ರಗಳಲ್ಲಿ ಕ್ವಾರಂಟೈನ್ ಕೇಂದ್ರಗಳ ನಿಯೋಜನೆ, ಅಧಿಕಾರಿಗಳ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಹರಾಷ್ಟ್ರ, ತಮಿಳುನಾಡು, ಗುಜರಾತ್ ಸೇರಿದಂತೆ ಇತರ ಸೋಂಕಿತ ರಾಜ್ಯಗಳಿಂದ ಅನುಮತಿ ಇಲ್ಲದೆ ಜನರು ಬರುವಂತಿಲ್ಲ. ಆ ರೀತಿ ಯಾರಾದರೂ ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.