ಮಧ್ಯಪ್ರದೇಶದಲ್ಲಿ ನದಿಗೆ ಉರುಳಿದ ಬಸ್: 6 ಸಾವು, 18 ಮಂದಿಗೆ ಗಾಯ

ರಾಯಿಸೆನ್, ಮಧ್ಯಪ್ರದೇಶ, ಅ 3:   ಬಸ್ಸೊಂದು ರೀಚ್ಹಾನ್ ನದಿಗೆ ಉರುಳಿದ ಪರಿಣಾಮ ಇಬ್ಬರು ಮಹಿಳೆಯರು, ಒಂದು ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿ, 18ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರಾಯಿಸೆನ್ ದರ್ಗಾ ಸಮೀಪ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಸಿನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರಿದ್ದರು. ಇಂದೋರ್ನಿಂದ ಚಾತರ್ಪುರಕ್ಕೆ ಹೋಗುವ ಮಾರ್ಗ ಮಧ್ಯೆ  ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಸ್ಥಳೀಯರು ಮತ್ತು ಪೊಲೀಸರು ವಾಹನದಿಂದ ಹೊರಗೆ ತಂದು ನಂತರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು.  ಹನ್ನೊಂದು ಮಂದಿಯನ್ನು ಭೋಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ್ ಕೂಡ ಗಾಯಗೊಂಡಿದ್ದಾರೆ.ಅಪಘಾತದಲ್ಲಿ ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 10 ಸಾವಿರ ರೂ.ಪರಿಹಾರವನ್ನು ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ಮಂಡೀಪುರದಿಂದ ಕ್ರೇನ್ ತಂದು ಬಸ್ಸನ್ನು ಹೊರತೆಗೆಯಲಾಗಿದೆ ಎಂದು ಇನ್ಸ್ಪೆಕ್ಟರ್ ಜನರಲ್ ಆಶುತೋಷ್ ರಾಯ್ ತಿಳಿಸಿದ್ದಾರೆ. ಮೃತಪಟ್ಟವರನ್ನು ರವಿ ಬನ್ಸಾಲ್ (ಛಾತರ್ಪುರ), ಸಾಗರ್ಬಾಯಿ (ರಾಯಿಸನ್), ಅನ್ವರ್ ಖಾನ್ (ಸಾಗರ್), ಉಜೆಫಾ ಖಾನ್ (ಬೇಗಮ್ಗಂಜ್) ಮತ್ತು ಎರಡು ವರ್ಷದ ದೀಪಕ್ ಬನ್ಸಾಲ್ ಎಂದು ಗುರುತಿಸಲಾಗಿದೆ.