ಮಂಗಳೂರಿನಲ್ಲಿ ಕೊರೋನಾಗೆ 58 ವರ್ಷದ ಮಹಿಳೆ ಬಲಿ: ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 4ಕ್ಕೇರಿಕೆ

ಮಂಗಳೂರು, ಮೇ 13, ಮಂಗಳೂರಿನಲ್ಲಿ ಕೊರೋನಾ ಸೋಂಕಿಗೆ ನಾಲ್ಕನೇ ಬಲಿಯಾಗಿದೆ.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ಹಿಂದೂ ರುದ್ರಭೂಮಿ ಸಮೀಪದ ನಿವಾಸಿ, 58  ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ನಗರದ ಕೋವಿಡ್ ಆಸ್ಪತ್ರೆಯಲ್ಲಿಂದು ಮಧ್ಯಾಹ್ನ  12.45ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಏ.30ರಂದು ಅವರಿಗೆ ಸೋಂಕು ಪತ್ತೆಯಾಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ಬೋಳೂರಿನ ವೃದ್ಧೆ  ಮೆದುಳು, ಕ್ಷಯರೋಗ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದರು.

ಈ ಮಹಿಳೆ ಮಂಗಳೂರು ಹೊರವಲಯದ  ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆ ಆಸ್ಪತ್ರೆಯ ಆಯಾ ಆಗಿರುವ  ಬಂಟ್ವಾಳ ತಾಲೂಕಿನ ಸಿಬ್ಬಂದಿಯೊಬ್ಬರು ಮಹಿಳೆಯನ್ನು ಉಪಚರಿಸುತ್ತಿದ್ದರು. ಈ ನಡುವೆ  ಆಯಾಗೆ ಕೊರೋನ ಸೋಂಕು ತಗುಲಿತ್ತು. ಪಡೀಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ  ಮರಳಿದ್ದ 58 ವರ್ಷದ ಈ ಮಹಿಳೆಯಲ್ಲಿ ವಾರದ ಬಳಿಕ ಜ್ವರದ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ  ಹಿನ್ನೆಲೆಯಲ್ಲಿ ಅವರನ್ನು ಏಪ್ರಿಲ್ 28ರಂದು ಮಂಗಳೂರಿನ ಕೋವಿಡ್-19 ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿದ್ದು, ಏಪ್ರಿಲ್ 30ರಂದು  ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿತ್ತು.  ಈ ಮೂಲಕ ಫಸ್ಟ್ ನ್ಯೂರೋ ಎಡವಟ್ಟಿಗೆ ಒಟ್ಟು ನಾಲ್ವರು ಬಲಿಯಾದಂತಾಗಿದೆ. ಈ ಮೊದಲು ಬಂಟ್ವಾಳದ ಕಸಬಾ ಗ್ರಾಮದಲ್ಲೇ ಮೂವರು ಮೃತಪಟ್ಟಿದ್ದರು.