ಮೆಕ್ಕೆಜೋಳ ಬೆಳೆದ ರೈತರಿಗೆ 500 ಕೋಟಿ ರೂ. ಪ್ಯಾಕೇಜ್‌ ಘೋಷಿಸಿದ ಯಡಿಯೂರಪ್ಪ

ಬೆಂಗಳೂರು, ಮೇ 15, ಪ್ರಾಕೃತಿಕ ವಿಕೋಪಗಳಲ್ಲಿ ಸಾವನ್ನಪ್ಪುವ ಕುರಿ, ಮೇಕೆ, ಜಾನುವಾರುಗಳಿಗೆ 5  ಸಾವಿರ ರೂ . ಪರಿಹಾರ ಮುಂದುವರೆಸಲಾಗುವುದು. ಮೆಕ್ಕೆಜೋಳ ಬೆಳೆದ ರಾಜ್ಯದ 10 ಲಕ್ಷ ರೈತರಿಗೆ ತಲಾ‌  ಐದು‌ ಸಾವಿರ ರೂ. ಪರಿಹಾರ ನೀಡಲಾಗುವುದು. ಈ ಯೋಜನೆಗೆ 500 ಕೋಟಿ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ 19 ವಿರುದ್ಧದ ಸಮರದಲ್ಲಿ  ಮುಂಚೂಣಿಯ ಲಿ ಕಾರ್ಯನಿರ್ವಹಿಸುತ್ತಿರುವ 42500 ಆಶಾ ಕಾರ್ಯೆಕರ್ತೆಯರ ವಿಶೇಷ  ಸೇವೆಯನ್ನು ಗುರುತಿಸಿ ತಲಾ 3 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ.  ಇದಕ್ಕೆ 12 ಕೋಟಿ ರೂ ವೆಚ್ಚವಾಗಲಿದೆ . ಈ ಮೊತ್ತವನ್ನು ಸಹಕಾರ ಸಂಘ ಸಂಸ್ಥೆಗಳಿಮದ ಕ್ರೂಡೀಕರಿಸಿ ಸಹಕಾರ ಇಲಾಖೆಯ ವತಿಯಿಂದ ನೀಡಲಾಗುತ್ತದೆ ಎಂದರು.
 ಕೋವಿಡ್ 19ರ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಮೆಕ್ಕೆಜೋಳ  ಬೆಳೆಗಾರರಿಗೆ ಕೆಎಂಎಫ್ ಮೂಲಕ ಮೆಕ್ಕೆ ಜೋಳ ಖರೀದಿಸಲು ಈಗಾಗಲೇ 4ಜಿ ವಿನಾಯಿತಿ  ನೀಡಲಾಗಿದೆ. ಕೇಂದ್ರ ಸರ್ಕಾರ 1760 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿದೆ. ಆದರೆ ರೈತರಿಗೆ  ಇಷ್ಟು ಬೆಲೆ ದೊರೆಯದ ಕಾರಣ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆದಿರುವ ಸುಮಾರು 10 ಲಕ್ಷ  ರೈತರಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗುವುದು.   ಇದಕ್ಕೆ ಸುಮಾರು 500 ಕೋಟಿ ರೂ. ವೆಚ್ಚವಾಗಲಿದೆ. ಇದರಿಂದಾಗಿ ಕೋವಿಡ್ 19 ಹಿನ್ನೆಲೆಯಲ್ಲಿ ಘೋಷಿಸಲಾದ ಪ್ಯಾಕೇಜ್ ಮೊತ್ತ 2272 ಕೋಟಿ ರೂ. ಗಳಷ್ಟಾಗಿದೆ ಎಂದು ಯಡಿಯೂರಪ್ಪ ಹೇಳಿದರು.ನೈಸರ್ಗಿಕ ವಿಕೋಪದಿಂದ ಮೇಕೆ, ಕುರಿಗಳ ಸಾವು ಸಂಭವಿಸಿದಲ್ಲಿ ಅವುಗಳಿಗೆ 5 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.
ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ,  ಎಪಿಎಂಸಿ ತಿದ್ದುಪಡಿ ಕಾಯ್ದೆಯ ಅನುಷ್ಠಾನದಿಂದ “ರೈತರೇ ಮೊದಲು” ಎಂಬ ಘೋಷವಾಕ್ಯದ ಅನುಷ್ಠಾನ ಸಾಧ್ಯವಾಗುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶ ಹೊಂದಿರುತ್ತಾರೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಯೋಗ್ಯ ಧಾರಣೆ ದೊರೆಯುವ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.
ಈ ಕಾಯ್ದೆಯಿಂದ ಪಿಎಂಸಿ ಕಮಿಟಿಗಳ ಅಸ್ತಿತ್ವಕ್ಕೆ ಯಾವುದೇ ಆಗುವುದಿಲ್ಲ. ಅವು ಹಿಂದಿನಂತೆ ಮುಂದುವರೆಯುತ್ತವೆ.  ಮಾರುಕಟ್ಟೆ ಪ್ರಾಂಗಣದ ಹೊರಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು ನಡೆಸಲು ಮತ್ತು ಮೇಲ್ವಿಚಾರಣೆಯನ್ನು ಕೃಷಿ ಮಾರಾಟ ನಿರ್ದೇಶಕರು ಮಾಡುತ್ತಾರೆ. ಈ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳನ್ನು ಮಾರುಕಟ್ಟೆ ಪ್ರಾಂಗಣಕ್ಕೆ  ಸೀಮಿತಗೊಳಿಸಿ ರೈತರು ಉತ್ತಮ ಧಾರಣೆ ಪಡೆಯಲು ಅವಕಾಶ ಒದಗಿಸಿ ಆ ಮೂಲಕ ರೈತರ ಬೆಳೆಗಳಿಗೆ  ಸ್ಪರ್ಧಾತ್ಮಕ ಮಾರುಕಟ್ಟೆ ಒದಗಿಸಿ ರೈತರ ಹಿತ ಕಾಯಲು ಅವಕಾಶ ನೀಡುತ್ತದೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ರೈತರ ಹಿತಾಸಕ್ತಿ ಸಂರಕ್ಷಣೆಯೇ ಮುಖ್ಯ ಎಂದು ಸಮರ್ಥನೆ ನೀಡಿದರು.
2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡಬೇಕು. ರೈತರಿಗೆ ನೆರವಾಗಬೇಕು  ಎನ್ನುವುದಕ್ಕಾಗಿಯೇ ಅನೇಕ ಕಾರ್ಯಕ್ರಮಗಳನ್ನು ಮತ್ತು ಸುಧಾರಣೆಗಳನ್ನು ಜಾರಿಗೆ  ತರಲಾಗುತ್ತಿದೆ. ಈಗಲೂ ಎಪಿಎಂಸಿ ಕಾಯ್ದೆಯನ್ನೇನೂ ನಾವು ತೆಗೆದು ಹಾಕಿಲ್ಲ. ಕೇವಲ ಕಾಯ್ದೆಯ ಎರಡು ಸೆಕ್ಷನ್ ಗಳಿಗೆ ತಿದ್ದುಪಡಿ ಮಾಡಿದ್ದೇವೆ. ಈ ಸುಧಾರಣೆಯ ಉದ್ದೇಶ- ನಮ್ಮ ರೈತರಿಗೆ ಮಾರುಕಟ್ಟೆಯ ಹೆಚ್ಚಿನ ಆಯ್ಕೆಗಳು  ಲಭಿಸಲಿವೆ. ನಮ್ಮ ರೈತರು ಎಪಿಎಂಸಿ ಯಾಗಲೀ ಅಥವಾ ಇತರೇ ವರ್ತಕರ ಅಧೀನಕ್ಕೆ  ಒಳಪಡುವುದಿಲ್ಲ. ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಉತ್ಪನ್ನ ಮಾರಾಟ ಮಾಡಬಹುದು.  ಬೆಂಬಲ ಬೆಲೆಗೆ ಕಡಿಮೆ ದರದಲ್ಲಿ ಖರೀದಿ ಮಾಡುವ, ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇದೆ. ಈ ಶೋಷಣೆಯನ್ನು ಇನ್ನು ಮುಂದೆ ತಪ್ಪಿಸಬಹುದು. ಇನ್ನು ಮುಂದೆ ಎಪಿಎಂಸಿಯಲ್ಲಿ ವ್ಯವಹಾರ ಮಾಡುವ ವರ್ತಕರು ರೈತರನ್ನು ಶೋಷಣೆ ಮಾಡುವುದು ತಪ್ಪುತ್ತದೆ ಎಂದು ವಿವರ ನೀಡಿದರು.
ಖಾಸಗಿಯವರೂ ಎಪಿಎಂಸಿ ಹೊರಗಡೆ ವ್ಯವಹಾರ ಮಾಡುವಾಗಲೂ ಕೂಡ ಷರತ್ತನ್ನು  ಪಾಲಿಸಬೇಕಾಗುತ್ತದೆ. ಸರ್ಕಾರದ ಅನುಮತಿ ಪಡೆಯಬೇಕಾಗಿದೆ. ಇದೆಲ್ಲವೂ ನಮ್ಮ ರೈತರ ಹಿತರಕ್ಷಣೆ, ಮಾರಾಟ ಸ್ವಾತಂತ್ರ್ಯ ನೀಡಲು ಸುಧಾರಣೆ ತರಲಾಗುತ್ತಿದೆ. ಆದರೆ ಕೆಲವರು ಇದರ ವಿರುದ್ಧ ಅಪಪ್ರಚಾರ ಮಾಡಿ ನಮ್ಮ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ರೈತರ ಹಿತಕ್ಕೆ ಧಕ್ಕೆ ಬರುವುದಾದರೆ, ರೈತರ ಹೆಸರಿನಲ್ಲಿ ಪ್ರಮಾಣವಚನ  ಸ್ವೀಕರಿಸಿದ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯುವುದಿಲ್ಲ ಎಂದು ಹೇಳಿದರು.
ಈ  ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳ ಅಸ್ತಿತ್ವಕ್ಕೆ ಯಾವುದೇ ದಕ್ಕೆ ಇಲ್ಲ. ಕೃಷಿ  ಉತ್ಪನ್ನವನ್ನು ಎಪಿಎಂಸಿ ಹೊರಗೆ ಮಾರಲು ಅವಕಾಶ ಕಲ್ಪಿಸಿರುವುದು ಹೊಸದೇನಲ್ಲ. ಈ  ತಿದ್ದುಪಡಿ ಕಾಯ್ದೆಯಿಂದ ರೈತರು ಉತ್ತಮ ಧಾರಣೆ ಪಡೆಯಲಿದ್ದಾರೆ. ಸ್ಪರ್ಧಾತ್ಮಕ  ಮಾರುಕಟ್ಟೆ ಸಿಗಲಿದೆ. 2008ರಿಂದಲೇ ಖಾಸಗೀ ಟ್ರೇಡಿಂಗ್ ಅಸ್ತಿತ್ವಕ್ಕೆ ಬಂದಿದೆ.  ಪ್ರತಿಪಕ್ಷ ಮುಖಂಡರೊಂದಿಗೆ, ರೈತ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ.  ಅನೇಕ ರಾಜ್ಯಗಳು ಈ ಕಾಯ್ದೆಯನ್ನು ಅಳವಡಿಸಿಕೊಂಡಿದ್ದಾರೆ. ಇದು ಐತಿಹಾಸಿಕ ತೀರ್ಮಾನ  ಎಂದು ಬಣ್ಣಿಸಿದರು.ನಮ್ಮ ಸದ್ಯದ ಹಣಕಾಸಿನ ಪರಿಸ್ಥಿತಿ ನೋಡಿದರೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿಗಳಾದ  ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ್, ಸಚಿವರಾದ ಡಾ. ಕೆ ಸುಧಾಕರ್,  ವಿ. ಸೋಮಣ್ಣ, ಎಸ್. ಟಿ.ಸೋಮ ಶೇಖರ್, ಜಗದೀಶ್ ಶೆಟ್ಟರ್, ಬಿ.ಸಿ. ಪಾಟೀಲ್, ಶಿವರಾಂ  ಹೆಬ್ಬಾರ್ ಉಪಸ್ಥಿತರಿದ್ದರು.