ಮಂಗಳೂರು, ಜ12: ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಜನರಿಗೆ 50 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ನಗರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ದೆರೆಬೈಲ್ ನಿವಾಸಿಗಳಾದ ಮಂಜುನಾಥ್ ನಾಯಕ್, ಅಶೋಕ್ ನಾಯಕ್, ಕೊಂಚಾಡಿ ನಿವಾಸಿ ಡೆಂಜಿಲ್ ಮಾಸ್ಕರೆನ್ಹಾಸ್, ಬೆಂಗಳೂರು ವಾಸಿಗಳಾದ ವಿಕಾಸ್ ನಾಯಕ್ ಹಾಗೂ ವಿಶ್ವನಾಥ್ ನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರದ ಎಂ.ಕೆ.ಧನುಶ್ ಎಂಬುವರು ಆರಂಭಿಸಿದ 'ಸ್ಪೀಕ್ ಅಂಡ್ ಗ್ರೂಪ್' ಎಂಬ ಸಂಸ್ಥೆಯಲ್ಲಿ ಬಂಧಿತರು ಕೆಲಸ ಮಾಡುತ್ತಿದ್ದರು. ಈ ಸಂಸ್ಥೆ ಅನಿವಾಸಿ ಭಾರತೀಯರು ಸೇರಿದಂತೆ ಸಾವಿರಾರು ಜನರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಠೇವಣಿ ಸಂಗ್ರಹಿಸುತ್ತಿತ್ತು. ಹೆಚ್ಚಿನ ಬಡ್ಡಿಯ ಕೆಲ ಹೊಸ ವಿಮೆ ಯೋಜನೆಗಳನ್ನು ಜನರಿಗೆ ತೋರಿಸಿ ಜನರನ್ನು ಈ ಸಂಸ್ಥೆ ನಂಬಿಸುತ್ತಿತ್ತು.
ವಂಚನೆ ಸಂಬಂಧ ಕಾವೂರು, ಕಂಕನಾಡಿ ಮತ್ತು ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಈ ಸಂಸ್ಥೆ ಮಂಗಳೂರಿನ ಬೊಂದೆಲ್, ವಲೆನ್ಸಿಯಾ ಹಾಗೂ ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಸಂಸ್ಥೆಯ ಮಾಲೀಕ ಡಿ 26ರಂದು ದುಬೈನಲ್ಲಿ ನಿಧನಹೊಂದಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧನುಶ್ ಮತ್ತು ಇತರ ಪ್ರಮುಖ ಆರೋಪಿ ಉದಯ್ ಕುಮಾರ್ ನಾಯಕ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣವನ್ನು ಸಿಐಡಿಗೆ ವಹಿಸುವುದಾಗಿ ನಗರ ಪೊಲೀಸ್ ಆಯುಕ್ತ ಡಾ ಪಿ.ಎಸ್.ಹರ್ಷ ತಿಳಿಸಿದ್ದಾರೆ.