ಶಿವಮೊಗ್ಗ, ಆ 11 ನೆರೆ ಪ್ರವಾಹದಲ್ಲಿ ಮಡಿದವರ ಕುಟುಂಬಕ್ಕೆ 5 ಲಕ್ಷ ರೂ.ಗಳನ್ನು ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತನೆ ನಡೆಸಿವೆ ಎಂದು ಶಿವಮೊಗ್ಗ ನಗರ ಶಾಸಕ ಹಾಗೂ ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ
ಸೊರಬದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ ವಿಕೋಪಗಳಿಂದ ನೋವುಂಟಾದವರಿಗೆ ಪರಿಹಾರ ನೀಡಬಹುದು. ಮೊದಲನೇ ಬಾರಿ ಕರ್ನಾಟಕ ರಾಜ್ಯದಲ್ಲಿ ಇಂತಹ ನೆರೆ ಬಂದಿದೆ. ನೆರೆಪ್ರವಾಹದಲ್ಲಿ ಜೀವರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ.ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರಗಳ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ನೆರೆ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ತುರ್ತನಿಧಿಗೆ ಹಣವಿದೆ.
ನೆರೆಪರಿಹಾರಕ್ಕೆ ರಾಜ್ಯ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ 178 ಕೋಟಿ ತುರ್ತ ಹಣ ನೀಡಿದೆ. ಅಮಿತ್ ಷಾ ರಾಜ್ಯಕ್ಕೆ 998 ಕೋಟಿ ಭಾನುವಾರ ಬಿಡುಗಡೆ ಮಾಡಿದ್ದಾರೆ. ತಾತ್ಕಾಲಿಕ ಪರಿಹಾರಗಳ ಜೊತೆಗೆ ಶಾಶ್ವತ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿಯೂ ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ನೂರಾರು ಸಣ್ಣಸಣ್ಣ ಸೇತುವೆಗಳು ಹಾನಿಯಾಗಿವೆ. ಶನಿವಾರ ರಾತ್ರವರೆಗೆ ಶಿವಮೊಗ್ಗದಲ್ಲಿ7 02 ಮನೆಗಳು ಬಿದ್ದುಹೋಗಿದ್ದು, 5 ಜನರು ಮೃತಪಟ್ಟಿದ್ದಾರೆ ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಷಾ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಪ್ರವಾಹಪರಿಸ್ಥಿತಿ ಕುರಿತು ಪಕ್ಷ ನಾಲ್ಕು ತಂಡದ ವರದಿ ಹಾಗೂ ಇಡೀ ರಾಜ್ಯದ ಅಧಿಕಾರಿ ವರ್ಗಗಳ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ವರದಿ ಆಧರಿಸಿ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಿದೆ ಎಂದರು.