ಕಾಶ್ಮೀರ, ಲಡಾಖ್ ನಲ್ಲಿ 5.3 ತೀವ್ರತೆಯ ಭೂಕಂಪ

ಶ್ರೀನಗರ, ಜ 12:      ಕಾಶ್ಮೀರ ಕಣಿವೆ ಮತ್ತು ಲಡಾಖ್ನ ಹಲವು ಪ್ರದೇಶಗಳಲ್ಲಿ ಭಾನುವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ.  

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3 ರಷ್ಟಿ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.  

ಭಾನುವಾರ ಬೆಳಗ್ಗೆ 10.50 ರ ಸುಮಾರಿಗೆ ಕಾಶ್ಮೀರ ಮತ್ತು ಕೇಂದ್ರಾಡಳಿತ ಪ್ರದೇಶಲಡಾಕ್ ನಲ್ಲಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಯೊಬ್ಬರು ಯುಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.   

ಲಡಾಖ್ ನಲ್ಲಿ 34.8 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 74.6 ಡಿಗ್ರಿ ಪೂರ್ವ ರೇಖಾಂಶದಲ್ಲಿ 10 ಕಿ.ಮೀ.ಆಳದಲ್ಲಿ  ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. 

 ಚಳಿಯ ವಾತಾವರಣ ಮತ್ತು ಹಿಮಪಾತದ ಹೊರತಾಗಿಯೂ, ಭೂಕಂಪದ ನಂತರ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಆದರೆ, ಈ ಪ್ರದೇಶದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.