4ಜಿ ಡೌನ್ಲೋಡ್ ವೇಗ: ಜುಲೈ ತಿಂಗಳಲ್ಲಿ ಜಿಯೋ ಪ್ರಥಮ, 3ಜಿಯಲ್ಲಿ ಬಿಎಸ್ಎನ್ಎಲ್ಗೆ ಮೊದಲ ಸ್ಥಾನ

ಬೆಂಗಳೂರು, ಆ 21           ಕಳೆದ ಜುಲೈ ತಿಂಗಳಿನಲ್ಲಿ ಪ್ರತಿ ಸೆಕೆಂಡಿಗೆ 21 ಮೆಗಾಬಿಟ್ಸ್ (ಎಂಬಿಪಿಎಸ್) ಸರಾಸರಿ ಡೌನ್ಲೋಡ್ ವೇಗದೊಂದಿಗೆ, ಅತ್ಯಂತ ವೇಗದ ಮೊಬೈಲ್ ಜಾಲವಾಗಿ ರಿಲಯನ್ಸ್ ಜಿಯೋ ತನ್ನ ಮುಂಚೂಣಿ ಸ್ಥಾನದಲ್ಲಿ ಮುಂದುವರೆದಿದೆ.  

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ದತ್ತಾಂಶದಲ್ಲಿ ಈ ವಿಷಯವನ್ನು ಪ್ರಕಟಿಸಿದ್ದು, ಅಪ್ಲೋಡ್ ವೇಗದಲ್ಲಿ ವೋಡಾಫೋನ್ ಪ್ರಥಮ ಸ್ಥಾನ ಪಡೆದುಕೊಂಡಿದೆ. 

ಜೂನ್ ತಿಂಗಳಿನಲ್ಲಿ 17.6 ಎಂಬಿಪಿಎಸ್ 4ಜಿ ಡೌನ್ಲೋಡ್ ವೇಗ ದಾಖಲಿಸಿದ್ದ ಜಿಯೋ, ಜುಲೈನಲ್ಲಿ 21 ಎಂಬಿಪಿಎಸ್ ತಲುಪುವ ಮೂಲಕ ವೇಗವನ್ನು ಉತ್ತಮಪಡಿಸಿಕೊಂಡಿದೆ. 

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಕಟಿಸಿರುವ ಸ್ಪೀಡ್ ಚಾರ್ಟ್ ಪ್ರಕಾರ ಏರ್ಟೆಲ್, ವೋಡಾಫೋನ್ ಹಾಗೂ ಐಡಿಯಾ ಸೆಲ್ಯುಲರ್ ಅನುಕ್ರಮವಾಗಿ 8.8 ಎಂಬಿಪಿಎಸ್, 7.7 ಎಂಬಿಪಿಎಸ್ ಹಾಗೂ 6.6 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗವನ್ನು ದಾಖಲಿಸಿವೆ. 

ಜುಲೈ ತಿಂಗಳಿನಲ್ಲಿ 2.5 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗದೊಡನೆ ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ಅತಿವೇಗದ 3ಜಿ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗದೊಡನೆ ಐಡಿಯಾ, 1.9 ಎಂಬಿಪಿಎಸ್ ನೊಡನೆ ವೋಡಾಫೋನ್ ಹಾಗೂ 1.4 ಎಂಬಿಪಿಎಸ್ ನೊಡನೆ ಏರ್ಟೆಲ್ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.   

ಜುಲೈನಲ್ಲಿ 5.8 ಎಂಬಿಪಿಎಸ್ ಸರಾಸರಿ ಅಪ್ಲೋಡ್ ವೇಗದೊಡನೆ ವೋಡಾಫೋನ್ ಅತಿವೇಗದ 4ಜಿ ಅಪ್ಲೋಡ್ ಜಾಲವಾಗಿ ಹೊರಹೊಮ್ಮಿದೆ. 5.3 ಎಂಬಿಪಿಎಸ್ ಅಪ್ಲೋಡ್ ವೇಗದೊಡನೆ ಐಡಿಯಾ ಸೆಲ್ಯುಲರ್, 4.3 ಎಂಬಿಪಿಎಸ್ ನೊಡನೆ ಜಿಯೋ ಹಾಗೂ 3.2 ಎಂಬಿಪಿಎಸ್ ನೊಡನೆ ಏರ್ಟೆಲ್, ಈ ಪಟ್ಟಿಯಲ್ಲಿ ನಂತರದ ಸ್ಥಾನಗಳನ್ನು ಪಡೆದಿವೆ. 

ಬಳಕೆದಾರರು ಯಾವುದೇ ವೀಡಿಯೋ ವೀಕ್ಷಿಸಲು, ಅಂತರ್ಜಾಲ ತಾಣಗಳನ್ನು ಬ್ರೌಸ್ ಮಾಡಲು, ಇಮೇಲ್ ಸಂದೇಶಗಳನ್ನು ಪಡೆದುಕೊಳ್ಳಲು ಡೌನ್ಲೋಡ್ ವೇಗ ಉತ್ತಮವಾಗಿರಬೇಕಾದದ್ದು ಅತ್ಯಗತ್ಯ. ಇದೇ ರೀತಿ ಗ್ರಾಹಕರು ಇಮೇಲ್ ಅಥವಾ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ಗಳ ಮೂಲಕ ಚಿತ್ರ, ವೀಡಿಯೋ ಮತ್ತಿತರ ಕಡತಗಳನ್ನು ಹಂಚಿಕೊಳ್ಳಲು ಅಪ್ಲೋಡ್ ವೇಗ ಉತ್ತಮವಾಗಿರಬೇಕಾಗುತ್ತದೆ.     

 3ಜಿ ಜಾಲಗಳ ಪೈಕಿ ಬಿಎಸ್ಎನ್ಎಲ್, ವೋಡಾಫೋನ್ ಹಾಗೂ ಐಡಿಯಾ ಜುಲೈ ತಿಂಗಳಿನಲ್ಲಿ 1.2 ಎಂಬಿಪಿಎಸ್ ಸರಾಸರಿ ಅಪ್ಲೋಡ್ ವೇಗ ದಾಖಲಿಸಿದರೆ, ಏರ್ಟೆಲ್ನ ಅಪ್ಲೋಡ್ ವೇಗ 0.6 ಎಂಬಿಪಿಎಸ್ ಗಳಷ್ಟಿತ್ತು. 

ರಿಲಯನ್ಸ್ ಜಿಯೋ ಕಳೆದ ಜೂನ್ ತಿಂಗಳಿನಲ್ಲಿ 82.6 ಲಕ್ಷ ಹೊಸ ಗ್ರಾಹಕರನ್ನು ಪಡೆದುಕೊಂಡಿದೆ ಎಂದೂ ಟ್ರಾಯ್ ದತ್ತಾಂಶ ಹೇಳಿದೆ. ಇದೇ ಅವಧಿಯಲ್ಲಿ ಹಳೆಯ ಸಂಸ್ಥೆಗಳಾದ ಭಾರ್ತಿ ಏರ್ಟೆಲ್ ಹಾಗೂ ವೋಡಾಫೋನ್ ಐಡಿಯಾ ಒಟ್ಟಾರೆ 41.75 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.   

ಈ ಮೂಲಕ ಒಟ್ಟು ಗ್ರಾಹಕರ ಪಟ್ಟಿಯಲ್ಲಿ ಜಿಯೋ 33.12 ಕೋಟಿ ಗ್ರಾಹಕರೊಡನೆ ಎರಡನೇ ಸ್ಥಾನಕ್ಕೆ ತಲುಪಿದ್ದು, 38.34 ಕೋಟಿ ಗ್ರಾಹಕರೊಡನೆ ವೋಡಾಫೋನ್ ಐಡಿಯಾ ಮೊದಲ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಭಾರ್ತಿ ಏರ್ಟೆಲ್ಗೆ 32.03 ಕೋಟಿ ಗ್ರಾಹಕರಿದ್ದಾರೆ.